ದೋಷಪೂರಿತ ಕಾರ್ ಮಾರಾಟ ಮಾಡಿದ್ದಕ್ಕಾಗಿ ಗ್ರಾಹಕರಿಗೆ ₹50 ಲಕ್ಷ ಪರಿಹಾರ ನೀಡುವಂತೆ ಬಿಎಂಡಬ್ಲ್ಯೂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸುಪ್ರೀಂ ಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ [ಆಂಧ್ರಪ್ರದೇಶ ಸರ್ಕಾರ ಮತ್ತು ಬಿಎಂಡಬ್ಲ್ಯೂ ಇಂಡಿಯಾ ಪ್ರೈ ಲಿ., ನಡುವಣ ಪ್ರಕರಣ].
ಇದೇ ವೇಳೆ ಬಿಎಂಡಬ್ಲ್ಯು ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಇನ್ನಿತರ ಅಧಿಕಾರಿಗಳ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ರದ್ದುಗೊಳಿಸಿತು.
ದೂರು ನೀಡಿರುವ ಜಿವಿಆರ್ ಇನ್ಫ್ರಾ ಪ್ರಾಜೆಕ್ಟ್ಸ್ ಸಂಸ್ಥೆ ಸೆಪ್ಟೆಂಬರ್ 2009ರಲ್ಲಿ ಬಿಎಂಡಬ್ಲ್ಯೂ 7 ಸರಣಿಯ ವಾಹನ ಖರೀದಿಸಿತ್ತು. ಆದರೆ, ಅಧಿಕೃತ ವರ್ಕ್‌ಶಾಪ್‌ನಲ್ಲಿ ಕಾರನ್ನು ದುರಸ್ತಿ ಮಾಡಿದ ಬಳಿಕವೂ ಅದರಲ್ಲಿ ಗಂಭೀರ ದೋಷ ಕಂಡುಬಂದಿತ್ತು.
ಸಂಸ್ಥೆಯು ಬಿಎಂಡಬ್ಲ್ಯೂ ವಂಚನೆ ಎಸಗಿದೆ ಎಂದು ಅದರ ವಿರುದ್ಧ ಐಪಿಸಿ ಸೆಕ್ಷನ್ 418 ಮತ್ತು 420ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಬಿಎಂಡಬ್ಲ್ಯೂ ನ ತಯಾರಕರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರ ನಿರ್ದೇಶಕರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.
ಬಿಎಂಡಬ್ಲ್ಯೂ ವಿರುದ್ಧದ ತನಿಖೆಯನ್ನು 2012ರಲ್ಲಿ ರದ್ದುಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್ , ಕಂಪನಿಯು ದೋಷಪೂರಿತ ಕಾರಿನ ಬದಲಿಗೆ ಹೊಸ ಕಾರನ್ನು ದೂರುದಾರರಿಗೆ ಒದಗಿಸಬೇಕು ಎಂದಿತು.
ಹೈಕೋರ್ಟ್ ಆದೇಶದಂತೆ ಹೊಸ ಕಾರನ್ನು ನೀಡಲು ಬಿಎಂಡಬ್ಲ್ಯೂ ಮುಂದಾಯಿತಾದರೂ ಅರ್ಜಿದಾರ ಸಂಸ್ಥೆ ಅದನ್ನು ನಿರಾಕರಿಸಿತು. ಬದಲಿಗೆ ಬಡ್ಡಿ ಸಹಿತ ತನ್ನ ಹಣ ಮರಳಿಸುವಂತೆ ಒತ್ತಾಯಿಸಿತು.
ಸುಪ್ರೀಂ ಕೋರ್ಟ್‌ನಲ್ಲಿ ಬಿಎಂಡಬ್ಲ್ಯೂ ಮತ್ತು ಅದರ ನಿರ್ದೇಶಕರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದೇ ಹೋದರೂ ಆಂಧ್ರಪ್ರದೇಶ ಸರ್ಕಾರ ಮತ್ತು ದೂರುದಾರರು ಮೇಲ್ಮನವಿ ಸಲ್ಲಿಸಿದರು.
ಕಾರ್ ಕಂಪನಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದ್ದರೂ ದೋಷಯುಕ್ತ ಕಾರನ್ನು ಬದಲಾಯಿಸಲು ಬಿಎಂಡಬ್ಲ್ಯೂ ಗೆ ನೀಡಿದ ನಿರ್ದೇಶನದ ಬಗ್ಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತು.
ಬಿಎಂಡಬ್ಲ್ಯೂ ವಂಚನೆ ಎಸಗಿರುವುದು ಸಾಬೀತಾಗದೇ ಇರುವಾಗ ಹೈಕೋರ್ಟ್ ಬದಲಿ ಕಾರು ನೀಡುವಂತೆ ಆದೇಶಿಸುವುದು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ನುಡಿಯಿತು. ಆದರೆ ವಿವಾದದ ಸ್ವರೂಪ ಗಮನಿಸಿದರೆ ಅದು ದೋಷಯುಕ್ತ ವಾಹನಕ್ಕೆ ಮಾತ್ರ ಸೀಮಿತವಾಗಿದ್ದು ವ್ಯಾಜ್ಯ ತಲೆ ಎತ್ತಿದ ಹದಿನೈದು ವರ್ಷಗಳ ನಂತರ ಪ್ರಾಸಿಕ್ಯೂಷನ್ ಮುಂದುವರೆಯಲು ಅವಕಾಶ ನೀಡುವುದು ನ್ಯಾಯದ ಹಿತಾಸಕ್ತಿಯನ್ನು ಪಾಲಿಸುವುದಿಲ್ಲ ಎಂದಿತು.
ಆದ್ದರಿಂದ, ಬಿಎಂಡಬ್ಲ್ಯೂ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವ ಹೈಕೋರ್ಟ್ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿತು. ಆದರೆ ದೋಷಯುಕ್ತ ಕಾರಿನ ಬದಲಿಗೆ ಹೊಸ ಕಾರ್ ನೀಡುವಂತೆ ಹೊರಡಿಸಿದ್ದ ಸೂಚನೆಯನ್ನು ಬದಿಗೆ ಸರಿಸಿತು.
ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸಿದ ಅದು ₹ 50 ಲಕ್ಷ ಪಾವತಿಸುವಂತೆ ಬಿಎಂಡಬ್ಲ್ಯೂಗೆ ನಿರ್ದೇಶನ ನೀಡಿತು.