ಸುದ್ದಿಗಳು

ಇಲ್ಲಿದೆ ಸುಪ್ರೀಂ ಕೋರ್ಟ್‌ ಹೊರಡಿಸಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆ ಮಾರ್ಗಸೂಚಿಯ ವಿವರ

ದೇಶಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಮಾನಸಿಕ ಆರೋಗ್ಯದ ಹಕ್ಕು ಎಂಬುದು ಜೀವಿಸುವ ಹಕ್ಕಿನ ಭಾಗವಾಗಿದೆ ಎಂದು ಹೇಳಿದೆ.

Bar & Bench

ಹದಿನೇಳು ವರ್ಷದ ನೀಟ್‌ ಅಭ್ಯರ್ಥಿಯ ಅನುಮಾನಾಸ್ಪದ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಶುಕ್ರವಾರ ಆದೇಶಿಸಿರುವ ಸುಪ್ರೀಂ ಕೋರ್ಟ್ ದೇಶದೆಲ್ಲೆಡೆಯ ಶಾಲೆ, ಕಾಲೇಜುಗಳು, ತರಬೇತಿ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳು ಪಾಲಿಸಬೇಕಾದ ಮಾನಸಿಕ ಆರೋಗ್ಯ ಮಾರ್ಗಸೂಚಿಯನ್ನು ಹೊರಡಿಸಿದೆ [ಸುಕ್ದೇಬ್ ಸಹಾ ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ದೇಶಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಮಾನಸಿಕ ಆರೋಗ್ಯದ ಹಕ್ಕು ಎಂಬುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಜೀವಿಸುವ ಹಕ್ಕಿನ ಭಾಗವಾಗಿದೆ ಎಂದು ಹೇಳಿದೆ.

ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಏಕೀಕೃತ ಕಾನೂನು ಚೌಕಟ್ಟು ಇಲ್ಲ. ರಾಜಸ್ಥಾನದ ಕೋಟಾ, ಜೈಪುರ, ಸಿಕಾರ್‌, ತೆಲಂಗಾಣ ರಾಜಧಾನಿ ಹೈದರಾಬಾದ್ ದೆಹಲಿ ಮತ್ತಿತರ ನಗರಗಳಲ್ಲಿ ಉನ್ನತ ವ್ಯಾಸಂಗ ಪ್ರವೇಶಾತಿಗಾಗಿ ತರಬೇತಿ ಒದಗಿಸುವ ಕೇಂದ್ರಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತುರ್ತು ಮಧ್ಯಂತರ ಸುರಕ್ಷತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅದು ಹೇಳಿದೆ.

ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆಗೆ (ನೀಟ್‌) ತಯಾರಿ ನಡೆಸಲು ವಿಶಾಖಪಟ್ಟಣಂನ ಆಕಾಶ್ ಬೈಜು ಸಂಸ್ಥೆಗೆ ಸೇರ್ಪಡೆಯಾಗಿದ್ದ ಪಶ್ಚಿಮ ಬಂಗಾಳದ ಮೃತ ಅಪ್ರಾಪ್ತ ಬಾಲಕಿ ಹಾಸ್ಟೆಲ್‌ನ ಮೂರನೇ ಮಹಡಿ ಛಾವಣಿಯಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆಕೆಯ ತಂದೆ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿತು.

ಇದೇ ವೇಳೆ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ಶಾಸಕಾಂಗ ಕಾನೂನು ಜಾರಿಗೆ ತರುವವರೆಗೆ ಸಂವಿಧಾನದ 32 ಮತ್ತು 141ನೇ ವಿಧಿಗಳನ್ನು ಬಳಸಿಕೊಂಡು ಶಾಲೆ, ಕಾಲೇಜುಗಳು, ತರಬೇತಿ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳು ಪಾಲಿಸಬೇಕಾದ ಮಾನಸಿಕ ಆರೋಗ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿತು:

  • ಉಮ್ಮೀದ್‌ (UMMEED) ಕರಡು ಮಾರ್ಗಸೂಚಿಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಜಾರಿಯಲ್ಲಿರುವ ಮನೋದರ್ಪಣ್ ಯೋಜನೆ ಮತ್ತು ಆತ್ಮಹತ್ಯೆ ತಡೆ ರಾಷ್ಟ್ರೀಯ ಕಾರ್ಯತಂತ್ರದ ಅಂಶಗಳನ್ನು ಪಡೆದು ಏಕರೂಪದ ಮಾನಸಿಕ ಆರೋಗ್ಯ ನೀತಿ ಅಳವಡಿಸಿಕೊಳ್ಳಬೇಕು.

  • ಈ ಅಂಶಗಳನ್ನು ವಾರ್ಷಿಕವಾಗಿ ಪರಿಶೀಲಿಸಿ ನವೀಕರಿಸಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಜಾಲತಾಣಗಳು ಸೂಚನಾ ಫಲಕಗಳಲ್ಲಿ ಇವುಗಳನ್ನು ಪ್ರಕಟಿಸಬೇಕು.

  • ಕನಿಷ್ಠ ಒಬ್ಬ ಆಪ್ತ ಸಲಹೆಗಾರ, ಮನಶ್ಶಾಸ್ತ್ರಜ್ಞರನ್ನು ಸಂಸ್ಥೆಗಳನ್ನು ನೇಮಿಸಿಕೊಳ್ಳಬೇಕು. 

  • ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಆಪ್ತ ಸಲಹೆಗಾರರ ಸಂಖ್ಯೆ ಇರುವಂತೆ ನೋಡಿಕೊಳ್ಳಬೇಕು.   

  • ಶೈಕ್ಷಣಿಕ ಸಾಧನೆ, ಸಾರ್ವಜನಿಕ‌ ಅಪಮಾನ ಅಥವಾ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಹೊಂದಾಣಿಕೆಯಾಗದ ಶೈಕ್ಷಣಿಕ ಗುರಿಗಳ ನಿಯೋಜನೆ ಆಧಾರದ ಮೇಲೆ ಬ್ಯಾಚ್‌ ಪ್ರತ್ಯೇಕಗೊಳಿಸುವುದನ್ನು ತಡೆಯಬೇಕು.  

  • ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳ ನೆರವು ಪಡೆಯುವುದಕ್ಕಾಗಿ ಲಿಖಿತ ಶಿಷ್ಟಾಚಾರಗಳನ್ನು ಸ್ಥಾಪಿಸಬೇಕು. ಟೆಲಿ-ಮನಸ್ ಮತ್ತಿತರ ರಾಷ್ಟ್ರೀಯ ಸೇವೆಗಳು ಸೇರಿದಂತೆ ಆತ್ಮಹತ್ಯೆ ಸಹಾಯವಾಣಿ ಸಂಖ್ಯೆಗಳನ್ನು ಹಾಸ್ಟೆಲ್‌ಗಳು, ತರಗತಿ ಕೊಠಡಿಗಳು, ಸಾಮಾನ್ಯ ಪ್ರದೇಶಗಳು ಮತ್ತು ಜಾಲತಾಣಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು.

  • ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿ ಪ್ರಮಾಣೀಕೃತ ಮಾನಸಿಕ ಆರೋಗ್ಯ ವೃತ್ತಿಪರರಿಂದ ಕಡ್ಡಾಯ ತರಬೇತಿ ಪಡೆಯಬೇಕು.

  • ಎಲ್ಲಾ ಬೋಧಕ, ಬೋಧಕೇತರ ಮತ್ತು ಆಡಳಿತ ಸಿಬ್ಬಂದಿಗೆ ದುರ್ಬಲ ಮತ್ತು ಸಮಾಜದ ಅಂಚಿನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ, ಒಳಗೊಳ್ಳುವಿಕೆಯ ಮೂಲಕ ಮತ್ತು ತಾರತಮ್ಯವಿಲ್ಲದ ರೀತಿಯಲ್ಲಿ ತೊಡಗಿಸಿಕೊಳ್ಳಲು ಸಮರ್ಪಕ ತರಬೇತಿ ನೀಡಬೇಕು.

  • ಜಾತಿ, ವರ್ಗ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ, ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ರ‍್ಯಾಗಿಂಗ್‌ ಮತ್ತು ಬೆದರಿಸುವಿಕೆಯಂತಹ ಘಟನೆಗಳನ್ನು ವರದಿ ಮಾಡಲು, ಪರಿಹರಿಸಲು ಮತ್ತು ತಡೆಗಟ್ಟಲು ಬಲವಾದ, ಗೌಪ್ಯ ಮತ್ತು ಲಭ್ಯವಾಗುವಂತಹ ಕಾರ್ಯವಿಧಾನಗಳನ್ನು ರೂಪಿಸಬೇಕು. ಅಂತಹ ಸಂದರ್ಭಗಳಲ್ಲಿ, ಸಂಸ್ಥೆ ಸಕಾಲಿಕ ಮತ್ತು ಸಮರ್ಪಕ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಆಗ ಅದನ್ನು ಸಾಂಸ್ಥಿಕ ಅಪರಾಧವೆಂದು ಪರಿಗಣಿಸಬೇಕು.

  • ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಪೋಷಕರು ಅಥವಾ ಪಾಲಕರಿಗೆ ಜಾಗೃತಿ ಕಾರ್ಯಕ್ರಮ ರೂಪಿಸಬೇಕು.

  •  ಅನಾಮಧೇಯ ದಾಖಲೆಗಳನ್ನು ನಿರ್ವಹಿಸಬೇಕು ಮತ್ತು ಕ್ಷೇಮ ವಿಚಾರಣೆ ಪ್ರಮಾಣ, ವಿದ್ಯಾರ್ಥಿಗಳ ಉಲ್ಲೇಖಗಳು, ತರಬೇತಿ ಅವಧಿಗಳು ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಚಟುವಟಿಕೆ ಕುರಿತಾದ ವಾರ್ಷಿಕ ವರದಿ ತಯಾರಿಸಬೇಕು.

  • ಕ್ರೀಡೆ, ಕಲೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ. ಶೈಕ್ಷಣಿಕ ಹೊರೆ ಕಡಿಮೆ ಮಾಡಲು ಪರೀಕ್ಷಾ ಮಾದರಿಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು.

  • ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಥವಾ ಪಾಲಕರಿಗೆ ನಿಯಮಿತ, ರಚನಾತ್ಮಕ ವೃತ್ತಿ ಆಪ್ತಸಮಾಲೋಚನೆ ಸೇವೆ ಒದಗಿಸಿ.

  • ತಮ್ಮ ಕ್ಯಾಂಪಸ್‌ಗಳು ಕಿರುಕುಳ, ಬೆದರಿಕೆ, ಮಾದಕ ದ್ರವ್ಯ ಮತ್ತಿತರ ಹಾನಿಕಾರಕ ವಸ್ತುಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ಹಾಸ್ಟೆಲ್ ಮಾಲೀಕರು, ವಾರ್ಡನ್‌ಗಳು ಮತ್ತು ಆರೈಕೆದಾರರು ಪೂರ್ವಭಾವಿ ಕ್ರಮ ತೆಗೆದುಕೊಳ್ಳಬೇಕು.

  • ಆತ್ಮಹತ್ಯೆಗೆ ಅನುವು ಮಾಡಿಕೊಡದಂತಹ ಸೀಲಿಂಗ್ ಫ್ಯಾನ್‌ಗಳು ಅಥವಾ ಅದಕ್ಕೆ ಸಮಾನವಾದ ಸುರಕ್ಷತಾ ಸಾಧನಗಳನ್ನು ಜಾರಿಗೆ ತರಬೇಕು. ಮೇಲ್ಛಾವಣಿಗಳು, ಬಾಲ್ಕನಿಗಳು ಮತ್ತಿತರ ಹೆಚ್ಚಿನ ಅಪಾಯದ ಪ್ರದೇಶಗಳಿಗೆ ವಿದ್ಯಾರ್ಥಿಗಳು ಹೋಗದಂತೆ ನಿರ್ಬಂಧಿಸಬೇಕು.

  • ಜೈಪುರ, ಕೋಟಾ, ಸಿಕಾರ್, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತೆರಳುವ ನಗರಗಳಲ್ಲಿರುವ ಎಲ್ಲಾ ತರಬೇತಿ ಕೇಂದ್ರಗಳು ಹೆಚ್ಚಿನ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಆತ್ಮಹತ್ಯೆ ತಡೆ ಕ್ರಮಗಳನ್ನು ಜಾರಿಗೆ ತರಬೇಕು.

ತೀರ್ಪು ಪ್ರಕಟವಾದ ದಿನದಿಂದ ಎರಡು ತಿಂಗಳೊಳಗೆ ಸಾಧ್ಯವಾದಷ್ಟು ಮಟ್ಟಿಗೆ ನಿಯಮಗಳನ್ನು ಪ್ರಕಟಿಸಬೇಕೆಂದು ನ್ಯಾಯಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ಇದಲ್ಲದೆ, ಮಾರ್ಗಸೂಚಿ ಜಾರಿಯನ್ನು ಮೇಲ್ವಿಚಾರಣೆ ಮಾಡಲು ತಪಾಸಣೆ ನಡೆಸಲು ಹಾಗೂ ದೂರು ಸ್ವೀಕೃತಿಗಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕೆಂದು ಆದೇಶಿಸಲಾಗಿದೆ  

ಈಗ ಎದ್ದಿರುವ ಗಂಭೀರ ಆತಂಕಗಳನ್ನು ಗಮನಿಸಿ  ತೀರ್ಪಿನ ದಿನಾಂಕದಿಂದ 90 ದಿನಗಳ ಒಳಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಜಾರಿಗೆ ಸಂಬಂಧಿಸಿದಂತೆ ಅನುಪಾಲನಾ ಅಫಿಡವಿಟ್  ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಗಮನಿಸಿ:

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಅಥವಾ ಸ್ವಯಂ-ಹಾನಿಯ ಆಲೋಚನೆ ಹೊಂದಿದ್ದರೆ, ದಯವಿಟ್ಟು ಕೆಳಗೆ ನೀಡಲಾದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ:

ಐಕಾಲ್ - 9152987821 (ಆರೋಗ್ಯ ಸಹಾಯವಾಣಿ - ಸೋಮ—ಶನಿ, ಬೆಳಿಗ್ಗೆ 10—ರಾತ್ರಿ 8.)

ಭಾವನಾತ್ಮಕ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಪ್ರೀತಿಪಾತ್ರರ ಆತ್ಮಹತ್ಯೆಯ ನಂತರ ಆಘಾತಕ್ಕೆ ಒಳಗಾಗುವವರಿಗೆ ಆಸ್ರಾ ಬೆಂಬಲ ನೀಡುತ್ತದೆ.

24x7 ಸಹಾಯವಾಣಿ: 9820466726

[ತೀರ್ಪಿನ ಪ್ರತಿ]

Sukdeb_Saha_v__State_of_Andhra_Pradesh___Others_.pdf
Preview