Justice S Ravindra Bhat and Justice Dipankar Datta 
ಸುದ್ದಿಗಳು

ಲೈಂಗಿಕ ಕಿರುಕುಳ ದೂರು ಸಲ್ಲಿಕೆಗೆ ಆಂತರಿಕ ದೂರು ಸಮಿತಿ ರಚಿಸಲು ಆಸ್ಪತ್ರೆ, ಕ್ರೀಡಾಂಗಣಗಳಿಗೆ ಸುಪ್ರೀಂ ಆದೇಶ

ಲೈಂಗಿಕ ದೌರ್ಜನ್ಯ ನಿಷೇಧ ಕಾಯಿದೆ ಅಡಿ ರೂಪಿಸಲಾದ ಜಿಲ್ಲಾ ಅಧಿಕಾರಿಗಳು ಮತ್ತು ಸ್ಥಳೀಯ ದೂರುಗಳ ಸಮಿತಿಗಳು ಕಡ್ಡಾಯವಾಗಿ ಲೈಂಗಿಕ ಕಿರುಕುಳ ಮತ್ತು ಲಿಂಗತ್ವ ಸಂವಹನ ಕುರಿತು ತರಬೇತಿ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Bar & Bench

ಕರ್ತವ್ಯದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ವರದಿ ಮಾಡಲು ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಕ್ರೀಡಾಂಗಣಗಳು, ಕ್ರೀಡಾ ಸಮುಚ್ಚಯ ಅಥವಾ ಕ್ರೀಡಾಕೂಟದ ಸ್ಥಳಗಳಲ್ಲಿ ಆಂತರಿಕ ದೂರುಗಳ ಸಮಿತಿ ರಚಿಸಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಕರ್ತವ್ಯದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ (ನಿಷೇಧ, ತಡೆ ಅಥವಾ ಪರಿಹಾರ) ಕಾಯಿದೆ 2013 (POSH Act - ಪೋಷ್‌ ಕಾಯಿದೆ) ಜೊತೆಗೆ ಪೋಷ್‌ ನಿಯಮಗಳನ್ನು ಜಾರಿ ಮಾಡಲು ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆ ಇನಿಷಿಯೇಟಿವ್ಸ್‌ ಫಾರ್‌ ಇನ್‌ಕ್ಲೂಸಿವ್‌ ಫೌಂಡೇಶನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರವೀಂದ್ರ ಭಟ್‌ ಮತ್ತು ದೀಪಂಕರ್‌ ದತ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕರ್ತವ್ಯದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ (ನಿಷೇಧ, ತಡೆ ಅಥವಾ ಪರಿಹಾರ) ನಿಯಮಗಳು 2013ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ನಿರ್ಧರಿಸಬಹುದು. ಲೈಂಗಿಕ ಕಿರುಕುಳ ತಡೆ ಕ್ರಮಗಳ ಅನುಷ್ಠಾನಕ್ಕೆ ಒಂದು ಇಲಾಖೆಯನ್ನು ಗುರುತಿಸಿ, ಆ ಇಲಾಖೆಯ ಒಳಗೆ ನೋಡಲ್‌ ಅಧಿಕಾರಿ ಹುದ್ದೆ ಸೃಷ್ಟಿಸಿ ಕಾಯಿದೆ ಜಾರಿಗೆ ಸಮನ್ವಯ ಸಾಧಿಸುವಂತೆ ಕ್ರಮಕೈಗೊಳ್ಳಬಹುದು ಎಂದು ನ್ಯಾಯಾಲಯ ಸಲಹೆ ನೀಡಿತು.

“ಇದು ದೇಶಾದ್ಯಂತ ಸದರಿ ಕಾಯಿದೆಯನ್ನು ಜಾರಿಗೊಳಿಸಲು ಏಕರೂಪತೆಯನ್ನು ಖಾತರಿಪಡಿಸಲಿದೆ” ಎಂದು ಪೀಠ ಹೇಳಿದೆ.

ಪೋಷ್‌ ಕಾಯಿದೆ ಜಾರಿಗೆ ನ್ಯಾಯಾಲಯದ ನಿರ್ದೇಶನಗಳು

  • ಇಲಾಖೆಯ ಒಳಗೇ ನೋಡಲ್‌ ಅಧಿಕಾರಿಯನ್ನು ಗೊತ್ತು ಮಾಡಿ ಸಮನ್ವಯ ಸಾಧಿಸಲು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲಸ ಮಾಡಬೇಕು.

  • ನ್ಯಾಯಾಲಯದ ಆದೇಶ ಐದು ವಾರಗಳ ಒಳಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಅಧಿಕಾರಿ ನೇಮಕಾತಿ ಖಾತರಿಪಡಿಸಬೇಕು.

  • ನೋಡಲ್‌ ಅಧಿಕಾರಿಗಳು, ಸ್ಥಳೀಯ ದೂರು ಸಮಿತಿಗಳ ಮಾಹಿತಿಯನ್ನು ರಾಜ್ಯದ ವ್ಯಾಪ್ತಿಯಲ್ಲಿನ ನೋಡಲ್‌ ವ್ಯಕ್ತಿ ಲಭ್ಯವಾಗುವುದನ್ನು ಜಿಲ್ಲಾ ಅಧಿಕಾರಿಗಳು ಖಾತರಿಪಡಿಸಬೇಕು.

  • ಜಿಲ್ಲಾ ಅಧಿಕಾರಿಗಳ ಹೆಸರು, ಅವರ ಸಂಪರ್ಕ, ಜಿಲ್ಲಾವಾರು ನೋಡಲ್‌ ಅಧಿಕಾರಿಗಳು ಮತ್ತು ಅವರ ಸಂಪರ್ಕ ವಿವರ ಆನ್‌ಲೈನ್‌ ಲಭ್ಯವಾಗಿಸಿ ಸುತ್ತೋಲೆ ಹೊರಡಿಸಬೇಕು.

  • ಕರ್ತವ್ಯದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಕುರಿತು ಜಿಲ್ಲಾ ಅಧಿಕಾರಿಗಳು ಮತ್ತು ಸ್ಥಳೀಯ ಸಮಿತಿಗಳಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು.

  • ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಕಾಯಿದೆಯ ಅರಿವು ಹೆಚ್ಚಿಸುವ ಕೆಲಸ ಮಾಡಲು ಅಗತ್ಯ ಹಣಕಾಸು ನೆರವು ಒದಗಿಸಬೇಕು.

  • ಪೋಷ್‌ ಕಾಯಿದೆ ಜಾರಿಗೆ ಸಂಬಂಧಿಸಿದ ಕೈಪಿಡಿಯನ್ನು ಎಲ್ಲಾ ಜಿಲ್ಲಾ ಮತ್ತು ಅತ್ಯಂತ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು.

  • ಪ್ರಕ್ರಿಯೆ, ಕಾಲಮಿತಿ, ನಿಗಾ ವ್ಯವಸ್ಥೆ ಮತ್ತು ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್‌ಒಪಿ ರೂಪಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.