(ಎಡದಿಂದ) ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌, ಅಭಯ್ ಓಕಾ, ಸಿಜೆಐ  ಚಂದ್ರಚೂಡ್,  ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
(ಎಡದಿಂದ) ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌, ಅಭಯ್ ಓಕಾ, ಸಿಜೆಐ ಚಂದ್ರಚೂಡ್, ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ  
ಸುದ್ದಿಗಳು

ತಡೆಯಾಜ್ಞೆ ಆದೇಶ ಆರು ತಿಂಗಳ ಬಳಿಕ ತನ್ನಷ್ಟಕ್ಕೇ ತೆರವಾಗದು ಎಂದ ಸುಪ್ರೀಂ: ಏಷ್ಯನ್‌ ರೀಸರ್ಫೇಸಿಂಗ್‌ ತೀರ್ಪು ರದ್ದು

Bar & Bench

ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಗಳಲ್ಲಿನ ಎಲ್ಲಾ ತಡೆಯಾಜ್ಞೆಗಳ ಅವಧಿಯನ್ನು ಆರು ತಿಂಗಳಿಗೆ ಸೀಮಿತಗೊಳಿಸಿ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ 2018ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಐವರು ಸದಸ್ಯರ ಪೀಠ ಗುರುವಾರ ಬದಿಗೆ ಸರಿಸಿದೆ.

ಏಷ್ಯನ್ ರಿಸರ್ಫೇಸಿಂಗ್ ಆಫ್ ರೋಡ್ ಏಜೆನ್ಸಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ತೀರ್ಪಿನಲ್ಲಿ ವಿವರಿಸಿದಂತೆ ಆರು ತಿಂಗಳ ನಂತರ ತಡೆಯಾಜ್ಞೆ ತಾನೇತಾನಾಗಿ ತೆರವಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾಜೆ ಬಿ ಪರ್ದಿವಾಲಾಪಂಕಜ್ ಮಿತ್ತಲ್‌ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

"ಏಷ್ಯನ್ ರಿಸರ್ಫೇಸಿಂಗ್ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೇವೆ. ತನ್ನಿಂತಾನೇ ತಡೆಯಾಜ್ಞೆ ತೆರವಾಗುವಂತಿಲ್ಲ" ಎಂದು ನ್ಯಾಯಾಲಯ ನುಡಿದಿದೆ.

ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಗಳಲ್ಲಿನ ಎಲ್ಲಾ ತಡೆಯಾಜ್ಞೆಗಳನ್ನು ನಿರ್ದಿಷ್ಟವಾಗಿ ವಿಸ್ತರಿಸದ ಹೊರತು ಅವು ಆರು ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಏಷಿಯನ್ ರಿಸರ್ಫೇಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪಿನ 36 ಮತ್ತು 37 ಪ್ಯಾರಾಗಳಲ್ಲಿರುವ ನಿರ್ದೇಶನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

"ಹೈಕೋರ್ಟ್ ಹೊರಡಿಸಿದ ಎಲ್ಲಾ ಮಧ್ಯಂತರ ಆದೇಶಗಳ ನಿರ್ದೇಶನವು ತಾನೇತಾನಾಗಿ ಅಂತ್ಯಗೊಳ್ಳುತ್ತದೆ ಎಂಬ ಆದೇಶವನ್ನು 142ನೇ ವಿಧಿಯಡಿ ಹೊರಡಿಸಲಾಗುವುದಿಲ್ಲ. ಉಳಿದ ಯಾವುದೇ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಕಾಲಮಿತಿ ನಿಗದಿಪಡಿಸುವುದನ್ನು ಸಾಂವಿಧಾನಿಕ ನ್ಯಾಯಾಲಯಗಳು ತಪ್ಪಿಸಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಾಲಮಿತಿ ತೀರ್ಪುಗಳಿಗೆ ಸಂಬಂಧಿಸಿದಂತೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇಂತಹ ನಿರ್ದೇಶನಗಳನ್ನು ನೀಡಬೇಕು ಎಂದು ಸಾಂವಿಧಾನಿಕ ಪೀಠ ಹೇಳಿದೆ.

ಪ್ರಕರಣದ ತೀರ್ಪನ್ನು ಪೀಠ ಡಿಸೆಂಬರ್ 13, 2023ರಂದು ಕಾಯ್ದಿರಿಸಿತ್ತು. ವಿಶೇಷವೆಂದರೆ, ತಡೆಯಾಜ್ಞೆ ಆದೇಶಗಳು ಸ್ವಯಂಚಾಲಿತವಾಗಿ ತೆರವಾಗುವುದನ್ನು ಹಾಜರಿದ್ದ ಯಾವುದೇ ವಕೀಲರು ಬೆಂಬಲಿಸಿರಲಿಲ್ಲ.

ಸುಪ್ರೀಂ ಕೋರ್ಟ್ ಕೂಡ ಏಷ್ಯನ್ ರಿಸರ್ಫೇಸಿಂಗ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತಾದರೂ ತಡೆಯಾಜ್ಞೆಗಳನ್ನು ವಿಸ್ತರಿಸುವಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡಿತ್ತು.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅಥವಾ ಸಾಲಿಸಿಟರ್ ಜನರಲ್(ಎಸ್‌ಜಿ) ತುಷಾರ್ ಮೆಹ್ತಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಸಹಾಯ ಮಾಡಲು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಹೈಕೋರ್ಟ್‌ಗಳ ವಿವೇಚನೆಯನ್ನು ಮೊಟಕುಗೊಳಿಸಲು ಸುಪ್ರೀಂ ಕೋರ್ಟ್‌ ಜುಡಿಷಿಯಲ್‌ ಮ್ಯಾಂಡಮಸ್‌ ಬಳಸುವಂತಿಲ್ಲ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ವಾದಿಸಿದ್ದರು.

ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ ಮತ್ತು ವಿಜಯ್ ಹನ್ಸಾರಿಯಾ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

ಹೈಕೋರ್ಟ್‌ಗಳು ಸೇರಿದಂತೆ ಪ್ರತಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಮಾದರಿ ಭಿನ್ನವಾಗಿರುವುದರಿಂದ, ಕೆಲವು ಪ್ರಕರಣಗಳಿಗೆ ಯಾವುದೇ ಆದ್ಯತೆಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಬಿಡುವುದು ಉತ್ತಮ ಎಂದು ನ್ಯಾಯಾಲಯ ಇಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.

"ಸಾಂವಿಧಾನಿಕ ನ್ಯಾಯಾಲಯಗಳು ಪ್ರಕರಣಗಳನ್ನು ನಿರ್ಧರಿಸಲು ಕಾಲಮಿತಿ ನಿಗದಿಪಡಿಸಬಾರದು ಏಕೆಂದರೆ ತಳಮಟ್ಟದ ಸಮಸ್ಯೆಗಳು ಸಂಬಂಧಿತ ನ್ಯಾಯಾಲಯಗಳಿಗೇ ತಿಳಿದಿದ್ದು ಅಂತಹ ಆದೇಶಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನೀಡಬೇಕು" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.