Parliament
Parliament 
ಸುದ್ದಿಗಳು

ಪ್ರಮುಖ ಪ್ರಕರಣಗಳ ಚರ್ಚೆಗೆ ಜನರು ನೇರ ಸಂಸತ್ತಿಗೇ ಮನವಿ ಸಲ್ಲಿಸಲು ಕೋರಿಕೆ: ಸಂಸತ್ತಿನ ಚಟುವಟಿಕೆ ಅಡ್ಡಿ ಎಂದ ಸುಪ್ರೀಂ

Bar & Bench

ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ವಿಷಯಗಳ ಕುರಿತು ಸಂಸತ್ತಿಗೆ ನೇರವಾಗಿ ಅರ್ಜಿ ಸಲ್ಲಿಸಿ ಚರ್ಚಿಸುವಂತೆ ಕೋರಲು ನಾಗರಿಕರಿಗೆ ಮೂಲಭೂತ ಹಕ್ಕಿದೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಬಗ್ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅಸಮಾಧಾನ ಸೂಚಿಸಿತು [ಕರಣ್ ಗಾರ್ಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮನವಿಗೆ ಸಂಬಂಧಿಸಿದಂತೆ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ʼಇದಕ್ಕೆ ಅನುಮತಿ ನೀಡಿದರೆ ಸಂಸತ್ತಿನ ಕಾರ್ಯಚಟುವಟಿಕೆಗೆ ಅಡ್ಡಿಯಾಗಬಹುದುʼ ಎಂದಿತು.

 “ಇದರಲ್ಲಿ ಎರಡು ಅಂಶಗಳಿವೆ. [ಈ ರೀತಿ ವ್ಯವಸ್ಥೆ ಇರುವ ದೇಶಗಳಿಗಿಂತ] ಭಾರತದ ಜನಸಂಖ್ಯೆ ಹೆಚ್ಚು. ನಾವು ಇದಕ್ಕೆ ಅನುಮತಿಸಿದರೆ ಏನಾಗಬಹುದು? ಇನ್ನು ಇದನ್ನು ಸಂವಿಧಾನದ 19 (1) ಎ ವಿಧಿಯಡಿ  ಘೋಷಿಸಬೇಕೆಂದು ನೀವು ಬಯಸುತ್ತೀರಿ. ಸಂಸತ್ತಿನ ಕಾರ್ಯಚಟುವಟಿಕೆಗೆ ಇದು ಸಂಪೂರ್ಣ  ಅಡ್ಡಿಯಾಗುತ್ತದೆ”ಎಂದು ನ್ಯಾ. ಜೋಸೆಫ್ ಟೀಕಿಸಿದರು.

ಪ್ರಧಾನ ಕಾರ್ಯದರ್ಶಿಗಳ ಬದಲಿಗೆ ಲೋಕಸಭೆ ಮತ್ತು ರಾಜ್ಯಸಭೆಯನ್ನು ಪಕ್ಷಕಾರರನ್ನಾಗಿ ಮಾಡಿರುವುದರಿಂದ  ಮನವಿ ವಿಚಾರಣೆಗೆ ಅರ್ಹವೇ ಎಂದು ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದರು. ಇದೇ ವೇಳೆ ಸರ್ಕಾರಕ್ಕೆ ಅಧಿಕೃತ ನೋಟಿಸ್‌ ನೀಡಲು ನಿರಾಕರಿಸಿದ ಪೀಠ ಅರ್ಜಿಯ ಪ್ರತಿಯನ್ನು ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಿಗೆ ಸಲ್ಲಿಸುವಂತೆ ಸೂಚಿಸಿತು. ಎರಡು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಯಲಿದೆ.

ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಕೀಲ ರೋಹನ್ ಜೆ ಆಳ್ವ, ವಕೀಲ ಜೋಬಿ ಪಿ ವರ್ಗೀಸ್ ವಾದ ಮಂಡಿಸಿದರು.  ಹೀಗೆ ನೇರವಾಗಿ ಸಂಸತ್ತಿಗೆ ಅರ್ಜಿ ಸಲ್ಲಿಸುವ ವಿಧಾನ ವಿದೇಶದಲ್ಲಿ ಚಾಲ್ತಿಯಲ್ಲಿದೆ. ಹೌಸ್ ಆಫ್ ಕಾಮನ್ಸ್‌, ವೆಸ್ಟ್‌ಮಿನ್‌ಸ್ಟರ್ ಮಾದರಿಯನ್ನು ದೇಶದಲ್ಲೂ ಅಳವಡಿಸಿಕೊಳ್ಳಬೇಕಿದೆ. ಸಂವಿಧಾನದ 14, 19 (1) (ಎ), ಮತ್ತು 21ನೇ ವಿಧಿಗಳ ಅಡಿಯಲ್ಲಿಈ ರೀತಿ ಅರ್ಜಿ ಸಲ್ಲಿಸಲು ನಾಗರಿಕರಿಗೆ ಮೂಲಭೂತ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು.