ಭಾರತದಲ್ಲಿ ಮಹಿಳೆಯರು, ಮಕ್ಕಳು ಹಾಗೂ ತೃತೀಯಲಿಂಗಿಗಳ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ನಿಭಾಯಿಸಲು ವಿವಿಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೇಳಿದೆ.
ಸರ್ವೋಚ್ಚ ನ್ಯಾಯಾಲಯ ಮಹಿಳಾ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಅತ್ಯಾಚಾರದಂತಹ ಲೈಂಗಿಕ ಅಪರಾಧಗಳಿಗೆ ಶಿಕ್ಷೆಯಾಗಿ ರಾಸಾಯನಿಕವಾಗಿ ಪುರುಷತ್ವ ನಾಶ. ಮಹಿಳೆಯರ ವಿರುದ್ಧದ ಪೈಶಾಚಿಕ ಕೃತ್ಯಗಳಿಗೆ ಜಾಮೀನು ದೊರೆಯದಂತಹ ನಿಯಮ ಜಾರಿಗೊಳಿಸುವಂತೆ ಪ್ರಧಾನವಾಗಿ ಅರ್ಜಿದಾರರು ಕೋರಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಇಂದು ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಶಿಕ್ಷಾರ್ಹ ಮತ್ತು ದಂಡದ ಕಾನೂನುಗಳಲ್ಲಿ ಎಲ್ಲಿ ನ್ಯೂನತೆ ಇದೆ ಎಂಬುದನ್ನು ನೋಡಬೇಕಿದೆ ಎಂದು ಈ ವೇಳೆ ನ್ಯಾಯಾಲಯ ಮೌಖಿಕವಾಗಿ ತಿಳಿಸಿತು.
ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಘೋರ ಅಪರಾಧಗಳು ಹೆಚ್ಚಿರುವುದನ್ನು ಮನವಿ ಪ್ರಸ್ತಾಪಿಸಿದೆ.
ಅಲ್ಲದೆ ಕೋಲ್ಕತ್ತಾದ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಹಲವಾರು ಇತ್ತೀಚಿನ ಲೈಂಗಿಕ ಹಿಂಸೆಯ ನಿದರ್ಶನಗಳನ್ನು ಉಲ್ಲೇಖಿಸಿರುವ ಅರ್ಜಿ ಸಾರ್ವಜನಿಕ ಸುರಕ್ಷತೆ ಕಾಪಾಡಿಕೊಳ್ಳುವ ಕಾನೂನು ಜಾರಿ ಯಲ್ಲಿ ವೈಫಲ್ಯ ಉಂಟಾಗಿದ್ದು ಇವುಗಳನ್ನು ಸರಿಪಡಿಸಬೇಕು ಎಂದಿದೆ.
ಅತ್ಯಾಚಾರಿಗಳ ಪುರುಷತ್ವ ನಾಶ, ಜಾಮೀನು ರಹಿತ ಆದೇಶ ಮಾತ್ರವಲ್ಲದೆ ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ನೋಂದಣಿ ಮಾಡಿಕೊಳ್ಳಬೇಕು; ಶಾಲೆಗಳಲ್ಲಿ ಲಿಂಗತ್ವ ಸಂವೇಧನೆ ಮತ್ತು ಅನಿಯಂತ್ರಿತ ಅಶ್ಲೀಲ ವಸ್ತುವಿಷಯಗಳ ಸಂಪೂರ್ಣ ನಿಷೇಧ. ಆರು ತಿಂಗಳಳೊಗೆ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತೀರ್ಪು ನೀಡುವುದು. ಕೆಲಸದ ಸ್ಥಳಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ತ್ರೀಯರಿಗೆ ಸೂಕ್ತ ಶೌಚಾಲಯ ಸೌಲಭ್ಯ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳಬೇಕು ಎಂದು ಅರ್ಜಿ ವಿವರಿಸಿದೆ.
ಜೊತೆಗೆ ಅತ್ಯಾಚಾರ ಅಥವಾ ಅಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಅಥವಾ ತನಿಖಾಧಿಕಾರಿಗಳ ನೈತಿಕ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವುದು. ಖಾಸಗಿ ಕ್ಯಾಬ್‌ಗಳಲ್ಲಿ ಸೇವೆ ಸಲ್ಲಿಸುವವರು ಗೌರವಯುತವಾಗಿ ಹೇಗೆ ವರ್ತಿಸಬೇಕು ಎಂಬ ಕುರಿತು ಕೈಪಿಡಿ ರೂಪಿಸುವುದು, ಶಾಲಾ ಪಠ್ಯಕ್ರಮದ ಭಾಗವಾಗಿ ನೈತಿಕ ವಿಜ್ಞಾನ ಮತ್ತು ಲೈಂಗಿಕ ಶಿಕ್ಷಣ ನೀಡುವುದು, ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಯಾಗಿ ಸಮರ ಕಲೆ ಕಲಿಸುವುದು; ಕೆಲಸದ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಪೋಶ್ ಕಾಯಿದೆಯಡಿ ಲಿಂಗ ಸಂವೇದನೆ ಸಮಿತಿ ಸ್ಥಾಪನೆಗೆ ಮನವಿ ಮಾಡಲಾಗಿದೆ.