Pulsar Suni 
ಸುದ್ದಿಗಳು

ಕೇರಳ ನಟಿ ಮೇಲಿನ ಹಲ್ಲೆ ಪ್ರಕರಣ: ಪಲ್ಸರ್ ಸುನಿಗೆ ಸುಪ್ರೀಂ ಕೋರ್ಟ್ ಜಾಮೀನು

ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುನಿಯನ್ನು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೀಠ ಆದೇಶಿಸಿದೆ.

Bar & Bench

ಮಲಯಾಳಂ ಸಿನಿಮಾ ನಟ ದಿಲೀಪ್ ಆರೋಪಿಯಾಗಿರುವ ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್‌ ಎನ್‌ ಎಸ್ ಸುನಿಲ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ [ಸುನೀಲ್ ಎನ್‌ಎಸ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಸುನಿ ಏಳು ವರ್ಷಗಳಿಂದ ಜೈಲುವಾಸ ಅನುಭವಿಸಿದ್ದು [ನಟ ದಿಲೀಪ್‌ ಸೇರಿದಂತೆ] ಇದೇ ಪ್ರಕರಣದ ಉಳಿದ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಇಂದು ಆದೇಶ ಪ್ರಕಟಿಸಿದೆ.

ಸುನಿಯನ್ನು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಸುನಿ ಜಾಮೀನಿನ ಮೇಲೆ ಬಿಡುಗಡೆಯಾಗುವ ಮುನ್ನ ವಿಚಾರಣಾ ನ್ಯಾಯಾಲಯ ಕಠಿಣ ಜಾಮೀನು ಷರತತು ವಿಧಿಸುವಂತೆ ರಾಜ್ಯ ಸರ್ಕಾರ ಕೇಳಬಹುದು ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ದೀರ್ಘ ಕಾರಾಗೃಹ ವಾಸ ಅನುಭವಿಸಿದ್ದು ವಿಚಾರಣೆ ಶೀಘ್ರ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲ. ಜಾಮೀನು ನೀಡುವಂತೆ ಮೇಲ್ಮನವಿ ಸಲ್ಲಿಸಲಾಗಿದೆ. ಜಾಮೀನು ಮಂಜೂರಿಗಾಗಿ ಅರ್ಜಿದಾರರನ್ನು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದು ರಾಜ್ಯ ಸರ್ಕಾರ ಕಠಿಣ ಜಾಮೀನು ಷರತ್ತು ವಿಧಿಸುವಂತೆ ಆಗ ವಾದಿಸಬಹುದು ಎಂದು ಅದು ವಿವರಿಸಿದೆ.

ಆದರೆ ಜಾಮೀನು ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಸುನಿಗೆ ವಿಧಿಸಿದ್ದ ದಂಡ ರದ್ದುಗೊಳಿಸಲು ಪೀಠ ನಿರಾಕರಿಸಿತು. ಹೈಕೋರ್ಟ್‌ ಈಗಾಗಲೇ ಭಾರೀ ಸಂಖ್ಯೆಯ ಪ್ರಕರಣಗಳ ಹೊರೆ ಅನುಭವಿಸುತ್ತಿದ್ದು ಅಂತಹ ಪ್ರಕರಣಗಳ ಸಂಖ್ಯೆಯ ಹೆಚ್ಚಳದ ಸ್ಥಿತಿಗೆ ಇನ್ನಷ್ಟು ಪ್ರಕರಣಗಳನ್ನು ಸೇರಿಸಿದ ಆರೋಪಿ, ಕಾನೂನು ಸೇವಾ ಪ್ರಾಧಿಕಾರಕ್ಕೆ ದಂಡದ ಮೊತ್ತ ಠೇವಣಿ ಇಡಬೇಕಿರುವುದರಿಂದ ತಾನು ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅದು ತಿಳಿಸಿತು.

ಹಿನ್ನೆಲೆ: ದುಷ್ಕರ್ಮಿಗಳ ಗುಂಪೊಂದು 2017ರಲ್ಲಿ, ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ವಾಹನದಲ್ಲಿ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿತ್ತು. ದಿಲೀಪ್ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ನಟ ದಾಳಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪಿಗಳಲ್ಲಿ ಸುನಿ ಕೂಡ ಸೇರಿದ್ದ.