ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಒಪ್ಪಿಗೆಗಾಗಿ ಪಂಜಾಬ್ ಶಾಸಕಾಂಗ ಸಲ್ಲಿಸಿದ್ದ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಾಕೀತು ಮಾಡಿದೆ.
ಕಳೆದ ಜೂನ್‌ನಲ್ಲಿ ನಡೆದ ಶಾಸಕಾಂಗ ಸಭೆಯ ಸಿಂಧುತ್ವದ ಬಗ್ಗೆ ರಾಜ್ಯಪಾಲರು ಅನುಮಾನ ವ್ಯಕ್ತಪಡಿಸಲು ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಜೂನ್‌ನಲ್ಲಿ ನಡೆದಿದ್ದ ಎರಡು ದಿನಗಳ ವಿಶೇಷ ಅಧಿವೇಶನ ಮಾರ್ಚ್‌ನಲ್ಲಿ ನಡೆದಿದ್ದ ಬಜೆಟ್ ಅಧಿವೇಶನದ ವಿಸ್ತರಣೆಯಾಗಿತ್ತು. ಮಾರ್ಚ್ 3ರಿಂದ ಮಾರ್ಚ್ 22ರ ನಡುವೆ ನಡೆದಿದ್ದ ವಿಸ್ತೃತ ಬಜೆಟ್ ಅಧಿವೇಶನದ ಕುರಿತು ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಮತ್ತು ಎಎಪಿ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅಧಿವೇಶನದ ಸಿಂಧುತ್ವವೇ ತಾನು ಮಸೂದೆಗಳಿಗೆ ಅಂಕಿತ ಹಾಕದಿರಲು ಕಾರಣ ಎಂದು ರಾಜ್ಯಪಾಲರು ಹೇಳಿದ್ದರು.
ಅಕ್ಟೋಬರ್ 20 ಮತ್ತು 21ರಂದು ಕರೆಯಲಾಗಿದ್ದ ಮತ್ತೊಂದು ಅಧಿವೇಶನವನ್ನು ಪುರೋಹಿತ್ ಕಾನೂನುಬಾಹಿರ ಎಂದು ಘೋಷಿಸಿದ್ದರು. ಆ ಬಳಿಕ ಮೂರು ಹಣಕಾಸು ಮಸೂದೆಗಳನ್ನು ತಡೆ ಹಿಡಿಯಲಾಗಿತ್ತು. ಜೂನ್ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ ನಾಲ್ಕು ವಿಧೇಯಕಗಳಿಗೂ ರಾಜ್ಯಪಾಲರ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ನ್ಯಾಯಾಲಯ ಪಂಜಾಬ್ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳೆರಡನ್ನೂ ತರಾಟೆಗೆ ತೆಗೆದುಕೊಂಡಿತು. "ವಿಧಾನಸಭೆಯ ಅಧಿವೇಶನವನ್ನು ಅನುಮಾನಿಸುವ ಯಾವುದೇ ಯತ್ನ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಂಟಕ " ಎಂದು ನ್ಯಾಯಾಲಯ ಹೇಳಿತು. ವಿಧಾನಮಂಡಲದ ಅಧಿವೇಶನವನ್ನು ಅಸಾಂವಿಧಾನಿಕ ಎಂದು ಕರೆದು ಮಸೂದೆಗಳಿಗೆ ಸಮ್ಮತಿಯನ್ನು ನೀಡದೆ ಇರುವುದು ಬೆಂಕಿಯೊಂದಿಗೆ ಆಟವಾಡಿದಂತೆ ಎಂದು ಅದು ರಾಜ್ಯಪಾಲರನ್ನು ಎಚ್ಚರಿಸಿತು.
ಜೂನ್ 19 ಮತ್ತು 20 ರಂದು ನಡೆದ ಅಧಿವೇಶನ ವಿಧಾನ ಸಭೆಯ ವ್ಯವಹಾರ ಮತ್ತು ನಡಾವಳಿ ನಿಯಮಗಳ ವ್ಯಾಪ್ತಿಯಲ್ಲಿದೆ. ಅಧಿವೇಶನದ ಸಿಂಧುತ್ವದ ಮೇಲೆ ಅನುಮಾನ ವ್ಯಕ್ತಪಡಿಸುವುದು ರಾಜ್ಯಪಾಲರಿಗೆ ಲಭ್ಯವಿರುವ ಸಾಂವಿಧಾನಿಕ ಆಯ್ಕೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಪ್ರಜಾಪ್ರಭುತ್ವದ ಸಂಸದೀಯ ಸ್ವರೂಪದಲ್ಲಿ, ನಿಜವಾದ ಅಧಿಕಾರ ಚುನಾಯಿತ ಜನ ಪ್ರತಿನಿಧಿಗಳಲ್ಲಿದೆ. ಸರ್ಕಾರ ರಾಜ್ಯ ಶಾಸಕರನ್ನು ಒಳಗೊಂಡಿರುವುದರಿಂದ, ಅವರು ಹೊಣೆಗಾರರಾಗಿದ್ದಾದ್ದು ಶಾಸಕಾಂಗದ ಪರಿಶೀಲನೆ ವ್ಯಾಪ್ತಿಗೆ ಬರುತ್ತಾರೆ. ರಾಜ್ಯಪಾಲರು ಮಂತ್ರಿಮಂಡಲದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂಬುದು ಪಾಲಿಸಬೇಕಾದ ಮೂಲಭೂತ ತತ್ವ ಎಂದು ನ್ಯಾಯಾಲಯ ತಿಳಿಸಿತು.
"ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕಗೊಂಡವರಾಗಿದ್ದು ರಾಜ್ಯ ಸರ್ಕಾರದ ನಾಮನಿರ್ದೇಶಿತ ಮುಖ್ಯಸ್ಥರಾಗಿರುತ್ತಾರೆ. ಸಾಂವಿಧಾನಿಕ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಷ್ಟೇ ಸಾಂವಿಧಾನಿಕ ರಾಜಕಾರಣಿಯಾಗುವುದು ಅವರ ಉದ್ದೇಶವಾಗಿರುತ್ತದೆ ಎಂದು ಅದು ವಿವರಿಸಿತು.
ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಿರಿಯ ವಕೀಲ ಸತ್ಯಪಾಲ್ ಜೈನ್ ವಾದ ಮಂಡಿಸಿದರು.