Prabir Purkayastha and NewsClick 
ಸುದ್ದಿಗಳು

ನ್ಯೂಸ್‌ಕ್ಲಿಕ್‌ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಬಂಧನ ರದ್ದುಗೊಳಿಸಿದ ಸುಪ್ರೀಂ: ಬಿಡುಗಡೆಗೆ ಆದೇಶ

ರಿಮಾಂಡ್ ಅರ್ಜಿಯ ಪ್ರತಿಯನ್ನು ಪುರಕಾಯಸ್ಥ ಅವರಿಗೆ ನೀಡದೆ ಸ್ವಾಭಾವಿಕ ನ್ಯಾಯದ ತತ್ವ ಉಲ್ಲಂಘಿಸಿರುವುದನ್ನು ಗಮನಿಸಿದ ಪೀಠ ಈ ಆದೇಶ ನೀಡಿದೆ.

Bar & Bench

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿ ಸುದ್ದಿ ಜಾಲತಾಣವಾದ ನ್ಯೂಸ್‌ಕ್ಲಿಕ್‌ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ಬಂಧನವನ್ನು ಸುಪ್ರೀಂಕೋರ್ಟ್‌ ಬುಧವಾರ ರದ್ದುಗೊಳಿಸಿದೆ [ಪ್ರಬೀರ್ ಪುರಕಾಯಸ್ಥ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಪುರಕಾಯಸ್ಥ ಅವರಿಂದ ಶ್ಯೂರಿಟಿ ಮತ್ತು ಜಾಮೀನು ಬಾಂಡ್ ಪಡೆದು ಬಿಡುಗಡೆ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಆದೇಶಿಸಿತು.

ರಿಮಾಂಡ್ ಅರ್ಜಿಯ ಪ್ರತಿಯನ್ನು ಪುರಕಾಯಸ್ಥ ಅವರಿಗೆ ನೀಡದೆ ಸ್ವಾಭಾವಿಕ ನ್ಯಾಯದ ತತ್ವ ಉಲ್ಲಂಘಿಸಿರುವುದನ್ನು ಗಮನಿಸಿದ ಪೀಠ ಈ ಆದೇಶ ನೀಡಿದೆ.

"ಅಪೀಲುದಾರರಿಗೆ ರಿಮಾಂಡ್ ಅರ್ಜಿಯ ಪ್ರತಿಯನ್ನು ನೀಡಲಾಗಿಲ್ಲ. ಇದು ಪಂಕಜ್ ಬನ್ಸಾಲ್ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಪ್ರಕಾರ ಮೇಲ್ಮನವಿದಾರನ ಬಂಧನವನ್ನು ಅಸಿಂಧುಗೊಳಿಸುತ್ತದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ಶ್ಯೂರಿಟಿ ಮತ್ತು ಜಾಮೀನು ಬಾಂಡ್ ಸಲ್ಲಿಸಿದ ಬಳಿಕವಷ್ಟೇ ಪುರಕಾಯಸ್ಥ ಅವರನ್ನು ಬಿಡುಗಡೆ ಮಾಡಬೇಕಿದೆ. ಇಲ್ಲದಿದ್ದರೆ, ಶ್ಯೂರಿಟಿ ಇಲ್ಲದೆ ಬಿಡುಗಡೆ ಮಾಡಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ.

ಯುಎಪಿಎ ಅಡಿ ದೆಹಲಿ ಪೋಲೀಸರು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಪುರಕಾಯಸ್ಥ ಅವರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ.

ಏಪ್ರಿಲ್ 30ರಂದು ಸುಪ್ರೀಂ ಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಪುರಕಾಯಸ್ಥ ಪರ ವಕೀಲರಿಗೆ ಮುಂಚಿತವಾಗಿ ತಿಳಿಸದೆ, ಅವರನ್ನು ಆಲಿಸದೆ, ರಿಮಾಂಡ್ ವಿಚಾರಣೆಯನ್ನು ಹೇಗೆ ನಡೆಸಲಾಯಿತು ಎಂಬ ಪ್ರಶ್ನೆಗಳನ್ನು ನ್ಯಾಯಾಲಯ  ವಿಚಾರಣೆಯ ಸಮಯದಲ್ಲಿ ಎತ್ತಿತ್ತು. ಪುರಕಾಯಸ್ಥ ಪರ ವಕೀಲರಿಗೆ ಬಂಧನದ ಬಗ್ಗೆ ಏಕೆ ಮುಂಗಡ ಸೂಚನೆ ನೀಡಿಲ್ಲ ಎಂದು ನ್ಯಾಯಾಲಯ ದೆಹಲಿ ಪೊಲೀಸರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತ್ತು.

ಚೀನಾ ಪರ ಪ್ರಚಾರಾಂದೋಲನ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಪುರಕಾಯಸ್ಥ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು.