ಬಹುಕೋಟಿ ಮೌಲ್ಯದ ಸುಸ್ತಿದಾರನಾಗಿದ್ದ ಸ್ಟರ್ಲಿಂಗ್ ಸಮೂಹ ಕಂಪೆನಿಯು ಸಾಲದಾತ ಬ್ಯಾಂಕುಗಳಿಗೆ ಡಿಸೆಂಬರ್ 17ರೊಳಗೆ ಪೂರ್ಣವಾಗಿ ಮತ್ತು ಅಂತಿಮ ಇತ್ಯರ್ಥದ ರೂಪವಾಗಿ ₹5,100 ಕೋಟಿ ನೀಡಲು ಒಪ್ಪಿದ ಹಿನ್ನೆಲೆಯಲ್ಲಿ ಅದರ ವಿರುದ್ಧದ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಹೇಮಂತ್ ಎಸ್ ಹಾಥಿ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ].
ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕಂಪನಿಯು ನೀಡಬೇಕಾದ ಸಂಪೂರ್ಣ ಮೊತ್ತವನ್ನು ಪಾವತಿಸಿದ ನಂತರ ಮೊಕದ್ದಮೆ ಕುರಿತ ಅಭಿಯೋಜನೆ ಮುಂದುವರೆಸುವುದು ಅನಗತ್ಯ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಹೇಳಿದೆ. ನ್ಯಾಯಾಲಯದ ವಿವೇಚನಾಧಿಕಾರ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಮತ್ತು ಸಾರ್ವಜನಿಕರ ಹಣ ಮರುಪಾವತಿಗೆ ಬಳಕೆಯಾಗಬೇಕು ಎಂದು ಅದು ಇದೇ ವೇಳೆ ತಿಳಿಸಿದೆ.
ಸಿಬಿಐ, ಜಾರಿ ನಿರ್ದೇಶನಾಲಯ (ಇ ಡಿ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಐಎಫ್‌ಒ) ಹಾಗೂ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಬಹು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಉದ್ಯಮಿಗಳಾದ ಹೇಮಂತ್ ಹಾಥಿ ಮತ್ತು ಚೇತನ್ ಜಯಂತಿಲಾಲ್ ಅರ್ಜಿ ಸಲ್ಲಿಸಿದ್ದರು. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಮತ್ತು ಅದರ ಸಮೂಹ ಕಂಪೆನಿಗಳು ಹಣಕಾಸು ಅಕ್ರಮ ಎಸಗಿವೆ ಎಂದು ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು.
ಭ್ರಷ್ಟಾಚಾರ ತಡೆ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ 2017 ರಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಇದಲ್ಲದೆ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಖಾತೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯಿದೆ, ಕಂಪನಿಗಳ ಕಾಯಿದೆ ಮತ್ತು ಕಪ್ಪು ಹಣ ಕಾಯಿದೆಯಡಿಯಲ್ಲಿಯೂ ತನಿಖೆ ಆರಂಭಿಸಲಾಗಿತ್ತು.
2020ರಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಆರಂಭವಾಗಿತ್ತು. ಪಾವತಿ ವಿಳಂಬವಾಗುತ್ತಿರುವ ಬಗ್ಗೆ ಆ ವೇಳೆ ನ್ಯಾಯಾಲಯ ಪ್ರಸ್ತಾಪಿಸಿತ್ತು. 2021–2024ರ ನಡುವೆ ಅರ್ಜಿದಾರ ಸಂಸ್ಥೆ ಪಾವತಿ ಕಾರ್ಯ ನಡೆಸಿತ್ತು.
ನವೆಂಬರ್ 2025ರಲ್ಲಿ, ಎರಡೂ ಪಕ್ಷಗಳ ವಿವರವಾದ ಲೆಕ್ಕಾಚಾರಗಳನ್ನು ಪೀಠ ಗಣನೆಗೆ ತೆಗೆದುಕೊಂಡಿತು. ಈ ವೇಳೆ ಬಾಕಿ ಇರುವ ಮೊತ್ತ ಸುಮಾರು ₹2,061 ಕೋಟಿಯಾದರೂ ಸಂಪೂರ್ಣ ವಿವಾದಕ್ಕೆ ತೆರೆ ಎಳೆಯಲೆಂದು ಮನವಿದಾರರು ಸ್ವಯಂಪ್ರೇರಿತವಾಗಿ ₹5,100 ಕೋಟಿ ಪಾವತಿಸಲು ಒಪ್ಪಿಕೊಂಡರು.
ಅಂತೆಯೇ 2025 ಡಿಸೆಂಬರ್ 17ರೊಳಗೆ ಪೂರ್ಣ ಹಣ ಪಾವತಿಯಾದ ನಂತರ ಅನ್ವಯವಾಗುವಂತೆ ನ್ಯಾಯಾಲಯ ಸಿಬಿಐ, ಇಡಿ ಎಸ್ಎಫ್ಐಒ, ಆದಾಯ ತೆರಿಗೆ ಇಲಾಖೆ, ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯಿದೆ, ಕಂಪನಿಗಳ ಕಾಯಿದೆ ಹಾಗೂ ಕಪ್ಪು ಹಣ ಕಾಯಿದೆಯಡಿ ದಾಖಲಿಸಿದ್ದ ಪ್ರಕರಣಗಳನ್ನು ರದ್ದುಗೊಳಿಸಿತು.
ಇದೇ ವೇಳೆ ನ್ಯಾಯಾಲಯ ಇದು ಈ ಪ್ರಕರಣಕ್ಕೆ ಮಾತ್ರ ಅನ್ವಯಿಸುವ ತೀರ್ಪು. ಭವಿಷ್ಯದ ಪ್ರಕರಣಗಳಿಗೆ ತೀರ್ಪು ಪೂರ್ವಾನ್ವವವಾಗದು ಎಂದು ಸ್ಪಷ್ಟಪಡಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ವಿಕ್ರಂ ಚೌಧರಿ ಮತ್ತವರ ತಂಡ ಪ್ರತಿವಾದಿಗಳ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಹಿರಿಯ ನ್ಯಾಯವಾದಿ ಆತ್ಮರಾಂ ಎನ್ ಎಸ್ ನಾಡಕರ್ಣಿ ಮತ್ತಿತರರು ವಾದ ಮಂಡಿಸಿದರು.