ಪ್ರಮುಖ ಬೆಳವಣಿಗೆಯಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ತನ್ನ ಶೈಕ್ಷಣಿಕ ಕೋರ್ಸ್ ಗಳಿಗೆ ಪ್ರವೇಶಾತಿ ಕಲ್ಪಿಸಲು ಮುಂದಾಗಿದ್ದ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ(ಎನ್‌ಎಲ್‌ಎಸ್‌ಐಯು) ಹಿನ್ನಡೆಯಾಗುವಂಥ ಮಹತ್ವದ ತೀರ್ಪು ಸೋಮವಾರ ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದಿದೆ. ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ-2020 (ಎನ್‌ಎಲ್‌ಎಟಿ) ಮೂಲಕ ಪ್ರತ್ಯೇಕ ಪ್ರವೇಶಾತಿ ಕಲ್ಪಿಸಲು ಮುಂದಾಗಿದ್ದ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಾಮಾನ್ಯ ಕಾನೂನು ಪ್ರವೃತ್ತಿ ಪರೀಕ್ಷೆಯ (ಸಿಎಲ್‌ಎಟಿ) ಅಂಕಗಳನ್ನು ಆಧರಿಸಿ ತನ್ನಲ್ಲಿನ ಕೋರ್ಸ್ ಗಳಿಗೆ ಪ್ರವೇಶಾತಿ ಕಲ್ಪಿಸಬೇಕು ಎಂದು ನ್ಯಾಯಾಲಯವು ಎನ್‌ಎಲ್‌ಎಸ್‌ಐಯುಗೆ ಆದೇಶಿಸಿದೆ.
ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿ ಕಲ್ಪಿಸುವ ಸಂಬಂಧ ಸೆಪ್ಟೆಂಬರ್ 3ರಂದು ಎನ್‌ಎಲ್‌ಎಟಿ ನಡೆಸಲು ಹೊರಡಿಸಿದ್ದ ಎನ್‌ಎಲ್‌ಎಸ್‌ಐಯು ಅಧಿಸೂಚನೆ ಹಾಗೂ ಈ ಸಂಬಂಧ ಹೊರಡಿಸಿದ್ದ ಪತ್ರಿಕಾ ಹೇಳಿಕೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಆರ್ ಸುಭಾಷ್ ರೆಡ್ಡಿ ಹಾಗೂ ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಸ್ತೃತ ವಾದ ಆಲಿಸಿದ ಬಳಿಕ ಸೆಪ್ಟೆಂಬರ್ 17ರಂದು ತೀರ್ಪು ಕಾಯ್ದಿರಿಸಿತ್ತು. ಇದಕ್ಕೂ ಮುನ್ನ ಎನ್‌ಎಲ್‌ಎಟಿ ನಡೆಸಲು ಅನುಮತಿ ನೀಡಿದ್ದ ನ್ಯಾಯಾಲಯವು ಫಲಿತಾಂಶವು ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿತ್ತು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಈಗಾಗಲೇ ನಿಗದಿಗೊಳಿಸಿರುವ ಸೆಪ್ಟೆಂಬರ್ 28ರಂದು ಸಿಎಲ್‌ಎಟಿ-2020 ನಡೆಸಬೇಕು ಎಂದು ಹೇಳಿದೆ.
ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಲ್‌ಎಟಿ ಪರೀಕ್ಷೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದರಿಂದ ಎನ್‌ಎಲ್‌ಎಸ್‌ಐಯು ಎನ್‌ಎಲ್‌ಎಟಿ-2020 ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಪ್ರವೇಶ ಕಲ್ಪಿಸಲು ಮುಂದಾಗಿತ್ತು. ಈ ನಿರ್ಧಾರವನ್ನು ಎನ್‌ಎಲ್‌ಎಸ್‌ಐಯು ವಿಶ್ರಾಂತ ಕುಲಪತಿ ಪ್ರೊ. ವೆಂಕಟರಾವ್ ಮತ್ತು ಆಕಾಂಕ್ಷಿಯ ಪೋಷಕರೊಬ್ಬರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು.
ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿ ಕಲ್ಪಿಸುವ ಸಂಬಂಧ ಸೆಪ್ಟೆಂಬರ್ 3ರಂದು ಎನ್‌ಎಲ್‌ಎಟಿ ನಡೆಸುವ ಸಂಬಂಧ ಹೊರಡಿಸಿದ್ದ ಎನ್‌ಎಲ್‌ಎಸ್‌ಐಯು ಅಧಿಸೂಚನೆಯನ್ನು ವಜಾಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಎನ್‌ಎಲ್‌ಎಟಿ ಬರೆಯಲು ಎನ್‌ಎಲ್‌ಎಸ್ಐಯು ಸೂಚಿಸಿದ್ದ ತಾಂತ್ರಿಕ ಸೌಲಭ್ಯಗಳ ಕುರಿತ ಅಧಿಸೂಚನೆ ರದ್ದು ಮತ್ತು ಸಿಎಲ್‌ಎಟಿ ಆಧಾರದಲ್ಲಿ ಎನ್‌ಎಲ್‌ಎಸ್‌ಐಯುನಲ್ಲಿ ಪ್ರವೇಶ ಕಲ್ಪಿಸಬೇಕು ಎಂಬ ಮನವಿಯನ್ನೂ ಮಾಡಲಾಗಿತ್ತು.
ಎನ್‌ಎಲ್‌ಎಟಿ ನಡೆಸುವಲ್ಲಿ ಎನ್‌ಎಲ್‌ಎಸ್‌ಐಯು ದಯನೀಯವಾಗಿ ವಿಫಲವಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ವಿನಾ ಕಾರಣ ಸಮಸ್ಯೆ ಎದುರಿಸಿದ್ದಾರೆ. ಪರೀಕ್ಷಾ ಪ್ರಕ್ರಿಯೆಯು ಅಪಾರದರ್ಶಕವಾಗಿರುವುದರಿಂದ ಇದನ್ನು ಯಶಸ್ವಿ ಎನ್ನಲಾಗದು ಎಂದು ಪ್ರತ್ಯುತ್ತರ ಮನವಿಯಲ್ಲಿ ವಿವರಿಸಲಾಗಿತ್ತು. ಇದಕ್ಕೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಎನ್‌ಎಎಲ್‌ಎಸ್‌ಎಆರ್ ಉಪಕುಲಪತಿ ಪ್ರೊ. ಫೈಜಾನ್ ಮುಸ್ತಾಫಾ ಅವರ ಮೂಲಕ ಪ್ರತಿ ಅಫಿಡವಿಟ್ ಸಲ್ಲಿಸಿತ್ತು.
ಮತ್ತೊಂದು ಕಡೆ ಎನ್‌ಎಲ್‌ಎಸ್‌ಐಯು ಮತ್ತು ಅದರ ಉಪಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರು ಎನ್ಎಲ್‌ಎಟಿ ನಡೆಸುವ ಕ್ರಮವನ್ನು ಸಮರ್ಥಿಸಿಕೊಂಡಿದ್ದದರು. ಅರ್ಜಿದಾರರ ಮನವಿಯ ನಿರ್ವಹಣೆಯನ್ನು ಪ್ರಶ್ನಿಸಿದ್ದ ಎನ್‌ಎಲ್‌ಎಸ್‌ಐಯು ಮತ್ತು ಅದರ ಉಪ ಕುಲಪತಿಯು ರಿಟ್ ಅರ್ಜಿಯನ್ನು ವಜಾ ಮಾಡುವುದರೊಂದಿಗೆ ತಕ್ಕ ದಂಡ ವಿಧಿಸಬೇಕು ಎಂದು ಕೋರಿದ್ದರು.
ಒಕ್ಕೂಟದ ಭಾಗವಾಗಿದ್ದೂ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ಪ್ರಮುಖವಾಗಿ ಪ್ರಶ್ನಿಸಲಾಗಿತ್ತು. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ಮೂಲಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕಲ್ಪಿಸುವ ಪ್ರಮುಖ ಉದ್ದೇಶದಿಂದ ಒಕ್ಕೂಟ ರಚಿಸಲಾಗಿದೆ ಎಂದು ಒಕ್ಕೂಟ ವಾದಿಸಿತ್ತು.
ಮನವಿದಾರರನ್ನು ಹಿರಿಯ ವಕೀಲರಾದ ನಿದೇಶ್ ಗುಪ್ತಾ ಮತ್ತು ಗೋಪಾಲ್ ಸುಬ್ರಮಣಿಯನ್ ಪ್ರತಿನಿಧಿಸಿದ್ದರು. ಎನ್‌ಎಲ್‌ಎಸ್‌ಐಯು ಮತ್ತು ಅದರ ಉಪಕುಲಪತಿಯ ಪರವಾಗಿ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಸಜ್ಜನ್ ಪೂವಯ್ಯ ವಾದಿಸಿದ್ದರು. ಹಿರಿಯ ವಕೀಲ ಪಿ ಎಸ್ ನರಸಿಂಹ ಅವರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವನ್ನು ಪ್ರತಿನಿಧಿಸಿದ್ದರು.