ಸುದ್ದಿಗಳು

'ಗುಜರಾತಿಗಳು ಮೋಸಗಾರರು' ಹೇಳಿಕೆ ವಾಪಸ್: ತೇಜಸ್ವಿ ಯಾದವ್ ವಿರುದ್ಧದ ಮಾನನಷ್ಟ ಮೊಕದ್ದಮೆ‌ ವಜಾಗೊಳಿಸಿದ ಸುಪ್ರೀಂ

ಮಾನನಷ್ಟ ಮೊಕದ್ದಮೆಯನ್ನು ಗುಜರಾತ್‌ ಹೊರಗಿನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಯಾದವ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ನೀಡಿತು.

Bar & Bench

ಗುಜರಾತಿಗಳನ್ನುದೂಷಿಸುವಂತಿದ್ದ ಕೆಲವು ಹೇಳಿಕೆಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿತು [ತೇಜಸ್ವಿ ಪ್ರಸಾದ್ ಯಾದವ್ ಮತ್ತು ಹರೇಶ್ ಭಾಯ್ ಪ್ರಾಣಶಂಕರ್ ಮೆಹ್ತಾ ನಡುವಣ ಪ್ರಕರಣ].

ಮಾನನಷ್ಟ ಮೊಕದ್ದಮೆಯನ್ನು ಗುಜರಾತ್‌ ಹೊರಗಿನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಯಾದವ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ನೀಡಿತು.

"ಅರ್ಜಿದಾರರು ತಮ್ಮ ಹೇಳಿಕೆಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪ್ರಕರಣ ರದ್ದುಗೊಳಿಸಿದ್ದೇವೆ. ಅದರಂತೆ (ಅರ್ಜಿಯನ್ನು) ವಿಲೇವಾರಿ ಮಾಡಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್

"ಗುಜರಾತಿಗಳಷ್ಟೇ ಮೋಸಗಾರರಾಗಲು ಸಾಧ್ಯ" ಎಂದು ಯಾದವ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.

ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಮತ್ತು ಅಪರಾಧ ತಡೆ ಮಂಡಳಿ ಎಂಬ ಸಂಘಟನೆಯ ಉಪಾಧ್ಯಕ್ಷ ಹರೇಶ್ ಮೆಹ್ತಾ ಅವರು ಗುಜರಾತ್‌ನ ಅಹಮದಾಬಾದ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಯಾದವ್ ಅವರ ಹೇಳಿಕೆಯು ಗುಜರಾತಿಗಳಿಗೆ ಮಾನಸಿಕ ಮತ್ತು ಭೌತಿಕ ಹಾನಿಯನ್ನುಂಟು ಮಾಡಿದೆ ಎಂದಿದ್ದ ಮೆಹ್ತಾ ಅವರು ಯಾದವ್ ಅವರಿಗೆ ಸಮನ್ಸ್‌ ನೀಡುವಂತೆ ಕರೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಒತ್ತಾಯಿಸಿದರು.

ಮಾನನಷ್ಟ ಮೊಕದ್ದಮೆಯನ್ನು ಗುಜರಾತ್‌ನಿಂದ 'ತಟಸ್ಥ ಸ್ಥಳಕ್ಕೆ' ವರ್ಗಾಯಿಸುವಂತೆ ಕೋರಿ ಬಿಹಾರದ ನಿಕಟಪೂರ್ವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಯಾದವ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಕೀಲರಾದ ವರುಣ್ ಜೈನ್, ನವೀನ್ ಕುಮಾರ್, ಅಖಿಲೇಶ್ ಸಿಂಗ್ ಹಾಗೂ ರಾಧಿಕಾ ಗೋಯಲ್ ಹಾಜರಿದ್ದರು.