ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸ್ಥಾಯಿ ಸಮಿತಿಯ ಆರು ಸದಸ್ಯತ್ವಕ್ಕೆ ಚುನಾವಣೆ ನಡೆಸುವ ಪ್ರಕ್ರಿಯೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಜನರಲ್ ವಿ ಕೆ ಸಕ್ಸೇನಾ ಅವರು ಮಧ್ಯಪ್ರವೇಶಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ [ಶೆಲ್ಲಿ ಒಬೆರಾಯ್ ಮತ್ತು ಲೆ. ಗವರ್ನರ್ ಕಚೇರಿ ಇನ್ನಿತರರ ನಡುವಣ ಪ್ರಕರಣ].
ಸೆಪ್ಟೆಂಬರ್ 27ರಂಣದು ನಡೆದಿದ್ದ ಚುನಾವಣೆಯನ್ನು ಲೆ. ಗವರ್ನರ್ ಕ್ರಮಕ್ಕೆ ಪ್ರತಿಭಟನೆ ವ್ಯಕ್ತಪಡಿಸಿ ಎಎಪಿ ಮತ್ತು ಕಾಂಗ್ರೆಸ್ ಬಹಿಷ್ಕರಿಸಿತ್ತು. ಕಡೆಗೆ ಬಿಜೆಪಿ ಅಭ್ಯರ್ಥಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು.
ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಲೆ. ಗವರ್ನರ್ ಅವರು ಚುನಾವಣೆ ನಡೆಸಲು ತರಾತುರಿಯಲ್ಲಿ ಮುಂದಾಗಿದ್ದನ್ನು ಪ್ರಶ್ನಿಸಿತು.
ಅಷ್ಟೊಂದು ಆತುರ ಏನಿತ್ತು? ಲೆ. ಗವರ್ನರ್ ಅವರಿಗೆ ಇಷ್ಟೆಲ್ಲಾ ಅಧಿಕಾರ ಎಲ್ಲಿಂದ ಬಂತು?ಸುಪ್ರೀಂ ಕೋರ್ಟ್
ಲೆ. ಗವರ್ನರ್ ಅವರು ಕೈಗೊಂಡ ಕ್ರಮ ಮಾನ್ಯವೇ ಎಂಬ ಬಗ್ಗೆ ಕೆಲ ಗಂಭೀರ ಆತಂಕಗಳಿವೆ. ಇದರಲ್ಲಿ ರಾಜಕೀಯ ಕೂಡ ಇದೆ. ಸದ್ಯಕ್ಕೆ ಸೆಕ್ಷನ್ 487 (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ) , ನಾವು ಪರಿಶೀಲಿಸುತ್ತೇವೆ. ತರಾತುರಿಯಲ್ಲಿ ಚುನಾವಣೆ ನಡೆಸುವಂತಹ ತುರ್ತೇನಿತ್ತು? ಮೇಯರ್ ಅವರು ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷತೆ ವಹಿಸುತ್ತಾರೆ. ಸೆಕ್ಷನ್ 487 ರ ಅಡಿಯಲ್ಲಿ ಲೆ. ಗವರ್ನರ್ ಅವರಿಗೆ ಈ ಅಧಿಕಾರ ಎಲ್ಲಿಂದ ಬಂತು? ಶಾಸಕಾಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯ ನುಡಿಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಈ ನಡುವೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದೂ ನ್ಯಾಯಾಲಯ ಮೌಖಿಕವಾಗಿ ಸೂಚನೆ ನೀಡಿದೆ.