NCR RRTS 
ಸುದ್ದಿಗಳು

ದೆಹಲಿ-ಮೀರತ್ ಕ್ಷಿಪ್ರ ರೈಲು ಯೋಜನೆಗೆ ತನ್ನ ಬಳಿ ಹಣ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ದೆಹಲಿ ಸರ್ಕಾರ

ಸರ್ಕಾರ ಜಾಹೀರಾತಿಗೆ ಹಣ ಮೀಸಲಿಟ್ಟಿರುವುದನ್ನು ಗಮನಿಸಿದ ನ್ಯಾಯಾಲಯ ಸುಗಮ ಸಾರಿಗೆ ಒದಗಿಸುವ ಯೋಜನೆಗೆ ಅದರ ಬಳಿ ಏಕೆ ಹಣ ಇಲ್ಲ ಎಂದು ಪ್ರಶ್ನಿಸಿತು.

Bar & Bench

ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಯೋಜನೆ ಜಾರಿ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಯೋಜನೆಗೆ ಹಣ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠಕ್ಕೆ ದೆಹಲಿ ಸರ್ಕಾರ ತಿಳಿಸಿತು.

ಈ ವೇಳೆ ನ್ಯಾಯಾಲಯವು, ನಿಮ್ಮ ಬಳಿ ಜಾಹೀರಾತಿಗೆ ಹಣ ಇರುವುದಾದರೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಏಕೆ ಹಣವಿಲ್ಲ ಎಂದು ಕುಟುಕಿತು.

ಅದರಂತೆ, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆರ್‌ಆರ್‌ಟಿಎಸ್‌ಗಾಗಿ (ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಜಾಹೀರಾತುಗಳಿಗಾಗಿ ಮಾಡಿದ ವೆಚ್ಚದ ವಿವರವನ್ನು ದಾಖಲೆಯಲ್ಲಿ ಸಲ್ಲಿಸುವಂತೆಯೂ ದೆಹಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.

ಆರ್‌ಆರ್‌ಟಿಎಸ್‌ ಯೋಜನೆಯು ಅರೆ-ಅತಿ ವೇಗದ ರೈಲು ಮಾರ್ಗ ಆಗಿದ್ದು, ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಈ ಕಾರಿಡಾರ್ ದೆಹಲಿ, ಗಾಜಿಯಾಬಾದ್ ಮತ್ತು ಮೀರತ್ ನಗರಗಳನ್ನು ಸಂಪರ್ಕಿಸುತ್ತದೆ. ರ‍್ಯಾಪಿಡ್ ಎಕ್ಸ್‌ ಯೋಜನೆಯ ಹಂತ Iರ ಅಡಿಯಲ್ಲಿ ರೂಪಿಸಲಾದ ಮೂರು ಕ್ಷಿಪ್ರ ರೈಲು ಪಥಗಳಲ್ಲಿ ಇದು ಒಂದಾಗಿದೆ.