ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಕೋವಿಡ್‌ ಲಾಕ್‌ಡೌನ್‌ ವೇಳೆ ಪರಿಸರ ಅನುಮತಿ ಸಡಿಲಿಕೆಗೆ ತರಾತುರಿ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

Bar & Bench

ಕೋವಿಡ್‌ ಲಾಕ್‌ಡೌನ್‌ ವಿಧಿಸಿದ್ದ ಅವಧಿಯಲ್ಲಿ ರಸ್ತೆಗಳು, ಪೈಪ್‌ಲೈನ್‌ ಮುಂತಾದ ಯೋಜನೆಗಳಿಗಾಗಿ ಮಣ್ಣನ್ನು ಹೊರತೆಗೆಯಲು ಪೂರ್ವ ಪರಿಸರ ಅನುಮತಿ ಪಡೆಯಬೇಕಿದ್ದ ನಿಯಮ ತೆಗೆದುಹಾಕಲು ತರಾತುರಿಯಾಗಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಭಾಗವನ್ನು ಸುಪ್ರೀಂ ಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ಮಾರ್ಚ್ 2020ರಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್‌ ಘೋಷಿಸಿದ್ದ ಎರಡು ದಿನಗಳ ಬಳಿಕ ಸಾರ್ವಜನಿಕ ಆಕ್ಷೇಪಣೆಗಳನ್ನು ಸಹ ಆಹ್ವಾನಿಸದೆ ಅನಗತ್ಯ ಅವಸರದಿಂದ ಅಧಿಸೂಚನೆ ಹೊರಡಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ವಿಧಿಸಿದ್ದ ಎರಡು ದಿನಗಳ ನಂತರ ಈ ಅಧಿಸೂಚನೆ ಹೊರಡಿಸಲಾಯಿತು. ಆಗ ರಸ್ತೆ, ಪೈಪಲೈನ್‌ ಮುಂತಾದ ಯೋಜನೆಗಳ ಕಾಮಗಾರಿ ಸ್ಥಗಿತಗೊಂಡಿತ್ತು. ಆದ್ದರಿಂದ, ಅಧಿಸೂಚನೆ ಮಾರ್ಪಡಿಸಲು ಯಾವುದೇ ಆತುರ ಇರಲಿಲ್ಲ ... ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಅಧಿಸೂಚನೆ ಹೊರಡಿಸುವಲ್ಲಿ ಕೇಂದ್ರ ಸರ್ಕಾರ ಅನಗತ್ಯ ಅವಸರ ತೋರಿದ್ದೇಕೆ ಎಂದು ಅರ್ಥವಾಗುತ್ತಿಲ್ಲ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಕಾನೂನಿನಲ್ಲಿ ಅಂತಹ ಮಹತ್ತರ ಬದಲಾವಣೆ ತರುವ ಮುನ್ನ ಸಾರ್ವಜನಿಕರ ಅವಗಾಹನೆಗೆ ತರದೆ ಇರುವುದನ್ನು ಮತ್ತು ಸಾರ್ವಜನಿಕರು ಪರಿಸರ ವಿಷಯಗಳಲ್ಲಿ ಪ್ರಮುಖ ಪಾಲುದಾರರಾಗಿದ್ದರೂ ಅವರಿಂದ ಆಕ್ಷೇಪಣೆ ಆಹ್ವಾನಿಸದೆ ಇರುವುದನ್ನು ಆಕಸ್ಮಿಕ ಎಂದು ತಳ್ಳಿಹಾಕಲಾಗದು ಎಂದು ನ್ಯಾಯಾಲಯ ಕಿಡಿಕಾರಿತು.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಉಜ್ಜಲ್ ಭುಯಾನ್

ಆ ಮೂಲಕ ನ್ಯಾಯಾಲಯ ಮಾರ್ಚ್ 28, 2020ರ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದ ವಿವಾದಾತ್ಮಕ ಷರತ್ತನ್ನು ಅದು ರದ್ದುಗೊಳಿಸಿತು.

"ರಸ್ತೆಗಳು, ಪೈಪ್‌ಲೈನ್‌ ರೀತಿಯ ಯೋಜನೆಗಳಿಗೆ ಸಾಮಾನ್ಯ ಭೂಮಿ ಅಗೆಯಲು ಅಥವಾ ಬಳಸಲು ಇಲ್ಲವೇ ಎರವಲು ಪಡೆಯಲು" ಪರಿಸರ ಅನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಲು ಮಾಡಲಾದ ತಿದ್ದುಪಡಿ ಅಧಿಸೂಚನೆ ದಾವೆಯ ಪ್ರಮುಖ ಭಾಗವಾಗಿತ್ತು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈ ಹಿಂದೆ 2020ರ ಅಧಿಸೂಚನೆ ರದ್ದುಗೊಳಿಸಲು ನಿರಾಕರಿಸಿತ್ತು. ಹೀಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅಂತಹ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಪರಿಸರ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು.

ಅಲ್ಲದೆ ಈ ಬಗೆಯ ಅಧಿಸೂಚನೆಯ ಅಗತ್ಯತೆಯ ಬಗ್ಗೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರ ಯಾವುದೇ ತೃಪ್ತಿ ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿತು.

ಸುರಕ್ಷತಾ ಕ್ರಮ ಸೇರಿಸದೆ ಪರಿಸರ ಅನುಮತಿ ಪಡೆಯಲು ಹೊರಡುವುದರಿಂದ ಅಂತಹ ಯಾವುದೇ ವಿನಾಯಿತಿ ನೀಡುವುದು ಸಂಪೂರ್ಣ ನಿರಂಕುಶವಾದುದು ಎಂದಿತು.

ಈ ಹಿನ್ನೆಲೆಯಲ್ಲಿ ಎನ್‌ಜಿಟಿ ನಿರ್ಧಾರದ ವಿರುದ್ಧದ ಮೇಲ್ಮನವಿಗೆ ಭಾಗಶಃ ಅವಕಾಶ ನೀಡಲು ಮುಂದಾದ ಅದು ಮಾರ್ಚ್ 2020 ರ ಅಧಿಸೂಚನೆಯಲ್ಲಿನ ಈ ಷರತ್ತು ಮತ್ತು ಆಗಸ್ಟ್ 2023 ರ ಅಧಿಸೂಚನೆಯಲ್ಲಿ ಸಂಬಂಧಿತ ಷರತ್ತನ್ನು ರದ್ದುಗೊಳಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಅನಿತಾ ಶೆಣೈ , ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ಹಿರಿಯ ವಕೀಲೆ ಸ್ವರೂಪಮಾ ಚತುರ್ವೇದಿ ಮತ್ತಿತರರು ವಾದ ಮಂಡಿಸಿದ್ದರು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Noble M Paikada vs Union of India.pdf
Preview