Kashi Vishwanath Temple and Gyanvapi mosque 
ಸುದ್ದಿಗಳು

ಜ್ಞಾನವಾಪಿ ಪ್ರಕರಣ: ಆಲಸ್ಯ ತೋರಿದ ಎಎಸ್ಐ ಮುಖ್ಯಸ್ಥರಿಗೆ ಅಲಾಹಾಬಾದ್ ಹೈಕೋರ್ಟ್ ತರಾಟೆ

Bar & Bench

ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯ ಒಳಗೆ ದೊರೆತ ಶಿವಲಿಂಗಾಕೃತಿಯ ಬಗ್ಗೆ ಸುರಕ್ಷಿತ ವೈಜ್ಞಾನಿಕ ಮೌಲ್ಯಮಾಪನ ಸಾಧ್ಯವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಹಾನಿರ್ದೇಶಕಿ ವಿ ವಿದ್ಯಾವತಿ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ [ಲಕ್ಷ್ಮಿ ದೇವಿ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರತಿಕ್ರಿಯೆ ನೀಡದ ಎಎಸ್‌ಐ ಮಹಾನಿರ್ದೇಶಕಿ ಅವರ ಆಲಸ್ಯದ ವರ್ತನೆ ವಿರುದ್ಧ ನ್ಯಾ. ಅರವಿಂದ್ ಕುಮಾರ್ ಮಿಶ್ರಾ-I ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಮಾರ್ಚ್ 20ರಂದು ನೀಡಲಾದ ಆದೇಶದ ಅನ್ವಯ, ಅಪೇಕ್ಷಿತ ವರದಿಯನ್ನು ಸಲ್ಲಿಸಲು, ಎಎಸ್‌ಐ ಡಿಜಿ ಅವರಿಗೆ ಕೊನೆಯ ಅವಕಾಶವನ್ನು ನೀಡಲಾಗಿತ್ತು, ಆದರೆ ಇನ್ನೂ ವರದಿ ಸಲ್ಲಿಸಿಲ್ಲ, ಈ ನಿಷ್ಕ್ರಿಯತೆ ಪ್ರಕರಣದಲ್ಲಿ  ನ್ಯಾಯಾಲಯ ವಿಚಾರಣೆ ನಡೆಸಲು ಅಡ್ಡಿಯಾಗಿ ತೋರುತ್ತಿದೆ. ನಿಸ್ಸಂಶಯವಾಗಿ ಪ್ರಾಧಿಕಾರದ ಈ ಆಲಸ್ಯ ವರ್ತನೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು ಇಂತಹ ಅಭ್ಯಾಸಕ್ಕೆ ಅಸಮ್ಮತಿ ಸೂಚಿಸಬೇಕಿದೆ, ”ಎಂದು ಪೀಠವು ಆದೇಶದಲ್ಲಿ ಹೇಳಿದೆ.

ದೇಶದೆಲ್ಲೆಡೆಯ ಪುರಾತತ್ವ ಇಲಾಖೆಯನ್ನು ನಿಯಂತ್ರಿಸುವ ಉನ್ನತ ಅಧಿಕಾರ ಹೊಂದಿರುವ ಅಧಿಕಾರಿ ತನ್ನ ಮುಂದಿರುವ ಸಮಸ್ಯೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದು ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದರು.

ದೇಶಾದ್ಯಂತ ಭಾರೀ ಪ್ರಚಾರ ಪಡೆದಿರುವ ಪ್ರಕರಣವನ್ನು ದೀರ್ಘಕಾಲದವರೆಗೆ ಬಾಕಿ ಉಳಿಸಿಕೊಳ್ಳಲಾಗದು ಎಂದು ನ್ಯಾಯಮೂರ್ತಿಗಳು ತಿಳಿಸಿದರು. “ವರದಿ ಸಲ್ಲಿಕೆ ನೆಪದಲ್ಲಿ ಅಧಿಕಾರಿಗಳು ಮಾಡುವ ವಿಳಂಬಕ್ಕೆ ನ್ಯಾಯಾಲಯ ಅನುಮತಿ ನೀಡುವುದಿಲ್ಲ” ಎಂದು ನುಡಿದ ಪೀಠ ಏಪ್ರಿಲ್ 17 ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಮಹಾ ನಿರ್ದೇಶಕರಿಗೆ ಅಂತಿಮ ಅವಕಾಶ ನೀಡಿತು.

ಕಳೆದ ವರ್ಷ ಮೇ ತಿಂಗಳಲ್ಲಿ ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾದ ಶಿವಲಿಂಗಾಕೃತಿಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಆದೇಶ ನೀಡುವಂತೆ ಹಿಂದೂ ಆರಾಧಕರು ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

 [ಆದೇಶದ ಪ್ರತಿಯನ್ನು ಇಲ್ಲಿ ಓದಿ]

Laxmi_Devi_vs_State_of_UP.pdf
Preview