Supreme Court, Electoral Bonds 
ಸುದ್ದಿಗಳು

ಚುನಾವಣಾ ಬಾಂಡ್ ಪ್ರಕರಣವನ್ನು ಸಾಂವಿಧಾನಿಕ ಪೀಠದ ಮುಂದಿರಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್

ಪ್ರಕರಣವನ್ನು ಕನಿಷ್ಠ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಮುಂದಿರಿಸಲು ಶಿಫಾರಸ್ಸು ಮಾಡುವ ನಿರ್ಧಾರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಇಂದು ಬೆಳಿಗ್ಗೆ ಪ್ರಕಟಿಸಿದರು.

Bar & Bench

ವಿವಾದಾತ್ಮಕ ಚುನಾವಣಾ ಬಾಂಡ್‌ ಯೋಜನೆ ಪ್ರಶ್ನಿಸಿದ್ದ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದಿರಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ಧರಿಸಿದೆ.  

ಪ್ರಕರಣವನ್ನು ಕನಿಷ್ಠ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಗೆ ಇರಿಸುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಇಂದು ಬೆಳಗ್ಗೆ ನಿರ್ಧಾರ ಪ್ರಕಟಿಸಿದರು.

“ತಲೆದೋರಿರುವ ಸಮಸ್ಯೆಯ ಪ್ರಾಮುಖ್ಯತೆ ದೃಷ್ಟಿಯಿಂದ ಸಂವಿಧಾನದ 145(4) ನೇ ವಿಧಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಕನಿಷ್ಠ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30, 2023 ರಂದು ನಡೆಯಲಿದೆ” ಎಂದು ಅವರು ತಿಳಿಸಿದರು.

ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಹರಿದಬರಲು ಕಾರಣವಾಗಿವೆ ಎಂದು ಆಕ್ಷೇಪಿಸಿ ಹಾಗೂ ಅದನ್ನು ಹಣಕಾಸು ಕಾಯಿದೆಯ ಸ್ವರೂಪದಲ್ಲಿ ತಂದಿರುವ ವಿಧಾವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಇರುವುದರೆಡೆಗೆ ಈ ಅರ್ಜಿಗಳಲ್ಲಿ ಬೆರಳು ಮಾಡಲಾಗಿತ್ತು.

ಅಕ್ಟೋಬರ್ 10 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಅ.31ರಂದು ಅಂತಿಮ ವಿಚಾರಣೆಗೆ ಪ್ರಕರಣ ಪಟ್ಟಿ ಮಾಡಲಾಗುವುದು ಎಂದು ಹೇಳಿತ್ತು. ಆಗ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಕುರಿತು ಚರ್ಚಿಸಿತ್ತಾದರೂ ಪ್ರಕರಣದ ತುರ್ತನ್ನು ಗಮನಿಸಿ ಹಾಗೆ ಮಾಡದಿರಲು ನಿರ್ಧರಿಸಿತ್ತು. ಆದರೆ ಕಾಯಿದೆಗಳನ್ನು ಹಣಕಾಸು ಮಸೂದೆ ರೂಪದಲ್ಲಿ ಅಂಗೀಕರಿಸುತ್ತಿರುವ ಸಂಬಂಧ ಉದ್ಭವಿಸಿರುವ ಕಾನೂನು ವಿವಾದವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಪೀಠವು ಇದಾಗಲೇ ನಿರ್ಧರಿಸಿಯಾಗಿದೆ.

ಚುನಾವಣಾ ಬಾಂಡ್‌ಗಳನ್ನು 2017ರ ವಿತ್ತೀಯ ಕಾಯಿದೆಯ ಮೂಲಕ ಪರಿಚಯಿಸಲಾಗಿದೆ. ಈ ಕಾಯಿದೆಯನ್ನು ಸರ್ಕಾರವು ಹಣಕಾಸು ಮಸೂದೆಯಾಗಿ ಜಾರಿಗೆ ತಂದಿತ್ತು. ಆ ಮೂಲಕ ರಾಜ್ಯಸಭೆಯ ಒಪ್ಪಿಗೆ ಇಲ್ಲದೆಯೇ ಅನುಮತಿಯನ್ನು ಪಡೆದುಕೊಂಡಿತ್ತು.

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಚುನಾವಣಾ ಬಾಂಡ್‌ಗಳನ್ನು ನೀಡಲಾಗುತ್ತದೆ.