Supreme Court of India 
ಸುದ್ದಿಗಳು

ಕೋಟ್ಯಂತರ ರೂಪಾಯಿ ಸುಲಿಗೆ ಪ್ರಕರಣ: ಆರೋಪಿ ಸುಕೇಶ್‌ ಚಂದ್ರಶೇಖರ್‌ ಪತ್ನಿಗೆ ಜಾಮೀನು ನಿರಾಕರಿಸಿದ ಸುಪ್ರೀಂ

Bar & Bench

ವಂಚನೆ ಪ್ರಕರಣಗಳಲ್ಲಿ ಬಂಧಿತನಾಗಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ಪ್ರಮುಖ ಆರೋಪಿಯಾಗಿರುವ  ₹200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ನಟಿ ಲೀನಾ ಪೌಲೋಸ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ಲೀನಾ ಪೌಲೋಸ್ ಮತ್ತು ದೆಹಲಿಯ ಸರ್ಕಾರ ನಡುವಣ ಪ್ರಕರಣ]. 

ಪೌಲೋಸ್ ವಿರುದ್ಧ ವಿವಿಧ ಗಂಭೀರ ಆರೋಪಗಳಿರುವುದರಿಂದ ಸುದೀರ್ಘ ವಿಚಾರಣೆ ಅಗತ್ಯವಿದೆ ಮತ್ತು ಸಹ-ಆರೋಪಿಗಳಿಗೆ ಜಾಮೀನು ದೊರೆಯದೆ ಇರುವುದರಿಂದ ಅವರು ಕೂಡ ಮಧ್ಯಂತರ ಜಾಮೀನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ರಜಾಕಾಲೀನ ಪೀಠ ತಿಳಿಸಿತು.

ಹೀಗಾಗಿ, ಪೌಲೋಸ್‌ಗೆ ಮಧ್ಯಂತರ ಪರಿಹಾರವನ್ನು ನಿರಾಕರಿಸಿ ಮೇ 25 ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಅದು ನಿರಾಕರಿಸಿತು.

"ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಸಹ ವಜಾಗೊಳಿಸಲಾಗುತ್ತಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪೌಲೋಸ್ ವಿರುದ್ಧದ ಪ್ರಕರಣ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ತನಿಖೆ ನಡೆಸುತ್ತಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದೆ.

ದೇಶದ ಬಹುರಾಷ್ಟ್ರೀಯ ಔಷಧ ಕಂಪೆನಿಯಾದ ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರಿಗೆ ಚಂದ್ರಶೇಖರ್ ₹200 ಕೋಟಿ ವಂಚಿಸಿದ್ದ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.

 ಕಾನೂನು ಸಚಿವಾಲಯದ ಅಧಿಕಾರಿಯಂತೆ ನಟಿಸಿದ್ದ ಸುಕೇಶ್‌, ಪ್ರಕರಣವೊಂದರಲ್ಲಿ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರಿಗೆ ಜಾಮೀನು ಕೊಡಿಸಲು ತಮ್ಮಿಂದ ಕೋಟ್ಯಂತರ ರೂಪಾಯಿ ಪಡೆದಿದ್ದ ಎಂದು ಸಿಂಗ್‌ದ್ವಯರ ಪತ್ನಿಯರು ಆರೋಪಿಸಿದ್ದರು.

ನಕಲಿ ಕಂಪೆನಿಗಳನ್ನು ಸೃಷ್ಟಿಸಿ ತಮ್ಮ ಕೃತ್ಯದಿಂದ ದೊರೆತ ಹಣವನ್ನು ವಿನಿಯೋಗಿಸಲು ಪೌಲೋಸ್, ಚಂದ್ರಶೇಖರ್ ಮತ್ತಿತರರು ಹವಾಲಾ ಮಾರ್ಗಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಐಪಿಸಿ ಸೆಕ್ಷನ್ 170, 186, 384, 386, 388, 419, 420, 406, 409, 420, 468, 471, 353, 506, 120 ಬಿ, ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ಡಿ ಮತ್ತು 1999ರ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿಯಲ್ಲಿ ಲೀನಾ ಪೌಲೋಸ್ ವಿರುದ್ಧ ಆರ್ಥಿಕ ಅಪರಾಧ ದಳ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ದೆಹಲಿ ಹೈಕೋರ್ಟ್  ಆಕೆಯ ಜಾಮೀನು ಅರ್ಜಿಯನ್ನು ಈ ಹಿಂದೆ ತಿರಸ್ಕರಿಸಿತ್ತು. ಬಳಿಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಕೆಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿತ್ತು.