Statue of Netaji Subash Chandra Bose 
ಸುದ್ದಿಗಳು

ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ಕುರಿತು ತನಿಖೆ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಅಂತಿಮವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಹಾಯ ಮಾಡಿದ್ದು ಬೋಸ್ ನೇತೃತ್ವದ ಆಜಾದ್ ಹಿಂದ್ ಫೌಜ್ ಎಂದು ನ್ಯಾಯಾಲಯ ಘೋಷಿಸಬೇಕು ಎಂಬುದಾಗಿ ಅರ್ಜಿದಾರರು ಕೋರಿದ್ದರು.

Bar & Bench

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ [ಪಿನಾಕ ಪಾಣಿ ಮೊಹಾಂತಿ ಮತ್ತ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ತೈವಾನ್‌ನಲ್ಲಿ 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಅವರು ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ.

ಬೋಸ್ ಸಾವಿನ ತನಿಖೆಗಾಗಿ ರಚಿಸಲಾದ ತನಿಖಾ ಆಯೋಗದ ತೀರ್ಮಾನದ ಸಿಂಧುತ್ವದ ಬಗ್ಗೆ ತೀರ್ಪು ನೀಡುವುದು ನ್ಯಾಯಾಲಯವಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.

"ನೀವು ಸೂಕ್ತ ವೇದಿಕೆಗೆ ಅರ್ಜಿ ಸಲ್ಲಿಸಬೇಕು. ನಾವು ಈ ಬಗ್ಗೆ ತೀರ್ಪು ನೀಡಲು ಸಾಧ್ಯವಿಲ್ಲ. ನೇತಾಜಿ ಸಾವಿನ ತನಿಖೆಯ ಆಯೋಗ ಸರಿಯಾಗಿದೆಯೇ ಎಂಬ ವಿಷಯ ನೀತಿ ನಿರೂಪಣೆಗೆ ಸಂಬಂಧಿಸಿದ್ದು ನ್ಯಾಯಾಲಯ ಅದನ್ನು ನಿರ್ಧರಿಸದು" ಎಂದು ನ್ಯಾಯಮೂರ್ತಿ ಕಾಂತ್ ಮೌಖಿಕವಾಗಿ ಟೀಕಿಸಿದರು.

1970ರ ಖೋಸ್ಲಾ ಆಯೋಗ ಮತ್ತು 1956 ರ ಶಾ ನವಾಜ್ ಆಯೋಗ ಬೋಸ್ ನಾಪತ್ತೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳದ ಕಾರಣ ಬೋಸ್ ಸಾವಿನ ಅಂಶದ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಬೋಸ್ ಅವರು 1945ರಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ.  ಆದ್ದರಿಂದ ನ್ಯಾಯಾಲಯ ವಿಚಾರಣೆಗೆ ಆದೇಶಿಸಬಹುದು ಎಂದು ಅರ್ಜಿದಾರರು ವಾದಿಸಿದರು.

ಅಂತಿಮವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಹಾಯ ಮಾಡಿದ್ದು ಬೋಸ್ ನೇತೃತ್ವದ ಆಜಾದ್ ಹಿಂದ್ ಫೌಜ್ ಎಂದು ನ್ಯಾಯಾಲಯ ಘೋಷಿಸಬೇಕು ಎಂಬುದಾಗಿಯೂ ಅರ್ಜಿದಾರರು ಕೋರಿದ್ದರು.

 ಆಗ ನ್ಯಾಯಮೂರ್ತಿ ಕಾಂತ್‌ ಅವರು "ನಾವು ತಜ್ಞರಲ್ಲ. ನೀವು ರಾಜಕೀಯ ಕಾರ್ಯಕರ್ತರಾಗಿದ್ದು, ನಿಮ್ಮ ಪಕ್ಷದಲ್ಲಿ ಮನವಿ ಸಲ್ಲಿಸಿ.. ಎಲ್ಲದಕ್ಕೂನ್ಯಾಯಾಲಯವೇ ಪರಿಹಾರವಲ್ಲ. ಸರ್ಕಾರ ನಡೆಸುವುದು ನ್ಯಾಯಾಲಯದ ಕೆಲಸವಲ್ಲ," ಎಂದು ಪಿಐಎಲ್‌ ತಿರಸ್ಕರಿಸುವ ವೇಳೆ ನ್ಯಾ. ಕಾಂತ್‌ ತಿಳಿಸಿದರು.