CBI, ED
CBI, ED A1
ಸುದ್ದಿಗಳು

ಪ್ರತಿಪಕ್ಷಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ: ರಾಜಕೀಯ ಪಕ್ಷಗಳ ಮನವಿ ಪರಿಗಣನೆಗೆ ಸುಪ್ರೀಂ ನಕಾರ

Bar & Bench

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐ, ಇ ಡಿ ರೀತಿಯ  ಕೇಂದ್ರೀಯ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಹದಿನಾಲ್ಕು ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ [ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ರಾಜಕೀಯ ನಾಯಕರು ಸಾಮಾನ್ಯ ನಾಗರಿಕರಿಗಿಂತಲೂ ಮಿಗಿಲಾದ ವಿನಾಯಿತಿ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿದೆ.

ಯಾರೋ ಸಾಮಾನ್ಯ ಪಿಂಚಣಿದಾರರ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿ ಅದನ್ನು ಮರಳಿಸದೇ ಇದ್ದಾಗ ಎಫ್‌ಐಆರ್‌ ದಾಖಲಾಗಿ ಪ್ರಕರಣ ಇಲ್ಲಿಗೆ ಬರುತ್ತದೆ. ಆಗ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ನಾವು ಹೇಳಬಹುದೇ? ರಾಜಕೀಯ ನಾಯಕರು, ಹೆಚ್ಚು ವಿನಾಯಿತಿ ಇಲ್ಲದ ಸಾಮಾನ್ಯರು ಇಬ್ಬರೂ ಒಂದೇ ಎಂದು ನ್ಯಾಯಾಲಯ ಒಪ್ಪಿಕೊಂಡಾಗಿದೆ. ಇಂತಹ ಸಂದರ್ಭದಲ್ಲಿ ಮೂರು ಹಂತದ ಪರೀಕ್ಷೆ ತೃಪ್ತಿಕರವಾಗದಿದ್ದರೆ ಬಂಧಿಸುವಂತಿಲ್ಲ ಎಂದು ನಾವು ಹೇಗೆ ಹೇಳಲು ಸಾಧ್ಯ? ಎಂದು ನ್ಯಾಯಾಲಯ ಪ್ರಶ್ನಿಸಿತು.

ನ್ಯಾಯಾಲಯದ ಮುಂದೆ ಪ್ರತಿಪಕ್ಷಗಳು ಇರಿಸಿದ್ದ ಅಂಕಿಅಂಶಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ನ್ಯಾಯಾಲಯವು, ಅರ್ಜಿದಾರರು ಅಂಕಿಅಂಶಗಳನ್ನು ಘನ ಕಾನೂನು ಮಾರ್ಗಸೂಚಿಗಳಾಗಿ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಅಂಕಿಅಂಶಗಳು ಕೇವಲ ರಾಜಕಾರಣಿಗಳಿಗೆ ಸಂಬಂಧಿಸಿವೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ವೈಯಕ್ತಿಕವಾಗಿ ನೊಂದಿರುವ ಯಾರು ಬೇಕಾದರೂ ಕಾನೂನಿನಡಿಯಲ್ಲಿ ಪರಿಹಾರಗಳನ್ನು ಪಡೆಯುವುದಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಆದರೆ ವೈಯಕ್ತಿಕ ಪ್ರಕರಣಗಳ ವಾಸ್ತವಾಂಶ ಲೆಕ್ಕಿಸದೆ ಯಾವುದೇ ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸಲಾಗದು ಎಂದು ಪೀಠ ಹೇಳಿತು. ನಂತರ ಅರ್ಜಿದಾರರು ಮನವಿ ಹಿಂಪಡೆಯಲು ಅನುಮತಿ ಕೋರಿದರು.

ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ, ಬಿಆರ್‌ಎಸ್‌, ಟಿಎಂಸಿ, ಎಎಪಿ, ಎನ್‌ಸಿಪಿ, ಶಿವಸೇನೆ ಉದ್ಧವ್‌ ಬಣ, ಜೆಎಂಎಂ, ಜೆಡಿಯು, ಸಿಪಿಐ, ಎಸ್‌ಪಿ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಅರ್ಜಿ ಸಲ್ಲಿಸಿದ್ದವು. ವಿರೋಧ ಪಕ್ಷದ ನಾಯಕರು, ಕೇಂದ್ರ ಸರ್ಕಾರದೊಂದಿಗೆ ಅಭಿಪ್ರಾಯ ಭೇದ ಇರುವ ಜನರ ವಿರುದ್ಧ ಬಲವಂತವಾಗಿ ಕ್ರಿಮಿನಲ್‌ ಮೊಕದ್ದಮೆಗಳ ಬಳಕೆಯಲ್ಲಿ ಆತಂಕಕಾರಿಏರಿಕೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.