Supreme Court of India 
ಸುದ್ದಿಗಳು

ಮದ್ಯದ ಶೀಶೆಯ ಮೇಲೆ ಎಚ್ಚರಿಕೆಯ ಪಟ್ಟಿ ಹಾಕಲು ಕೋರಿಕೆ: ಸರ್ಕಾರದ ನೀತಿಯ ಭಾಗ ಎಂದು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

“ಮದ್ಯ ಸೇವನೆಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಇವೆ. ಕಡಿಮೆ ಪ್ರಮಾಣದ ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ” ಎಂದು ನ್ಯಾಯಾಲಯ ಹೇಳಿತು.

Bar & Bench

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯ ಸೇವೆನೆ ಮತ್ತು ಉತ್ಪಾದನೆ, ವಿತರಣೆ ಹಾಗೂ ಸೇವನೆಯ ಮೇಲೆ ನಿಷೇಧ ಅಥವಾ ನಿಯಂತ್ರಣ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಬಿಜೆಪಿ ವಕ್ತಾರ ಮತ್ತು ವಕೀಲರಾದ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎಸ್‌ ರವೀಂದ್ರ ಭಟ್‌ ಅವರ ನೇತೃತ್ವದ ಪೀಠವು, ಇದು ಸರ್ಕಾರದ ನೀತಿನಿರ್ಧರಣದ ಭಾಗವಾಗಿದೆ. ಹೀಗಾಗಿ, ಅರ್ಜಿ ಹಿಂಪಡೆಯಿರಿ, ಇಲ್ಲವೇ ನಾವು ಅದನ್ನು ವಜಾಗೊಳಿಸುತ್ತೇವೆ ಎಂದಿತು. ಈ ಹಿನ್ನೆಲೆಯಲ್ಲಿ ಉಪಾಧ್ಯಾಯ ಅರ್ಜಿ ಹಿಂಪಡೆದರು.

“ಸ್ವಲ್ಪ ಅನುಗ್ರಹವನ್ನು (ನ್ಯಾಯಾಲಯ) ತೋರಿದರೂ ಯುವಕರಿಗೆ ಅನುಕೂಲವಾಗಲಿದೆ. ಅವುಗಳು ಹಾನಿಕಾರಕವಾದ್ದರಿಂದ ಎಚ್ಚರಿಕೆ ಸೂಚಿಸುವ ಪಟ್ಟಿ ಹಾಕಲು ಕೇಳುತ್ತಿದ್ದೇನೆ” ಎಂದು ಉಪಾಧ್ಯಾಯ ಪೀಠಕ್ಕೆ ಕೋರಿದರು.

ಇದಕ್ಕೆ ಪೀಠವು “ಈ ಕುರಿತು ಪರ ಮತ್ತು ವಿರೋಧದ ಅಭಿಪ್ರಾಯಗಳಿವೆ. ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ” ಎಂದ ಹೇಳಿ, ಅರ್ಜಿ ವಿಚಾರಣೆಗೆ ನಿರಾಕರಿಸಿತು.

ಹಾಗಾದರೆ, “ಕಾನೂನು ಆಯೋಗ ಸಂಪರ್ಕಿಸಲು ಸ್ವಾತಂತ್ರ್ಯ ಕಲ್ಪಿಸಬೇಕು” ಎಂದು ಉಪಾಧ್ಯಾಯ ಕೋರಿದರು. “ಇಲ್ಲ. ಅರ್ಜಿ ಹಿಂಪಡೆಯಲು ಮಾತ್ರ ಅನುಮತಿ” ಎಂದು ಪೀಠ ಸ್ಪಷ್ಟಪಡಿಸಿತು.

ರಾಷ್ಟ್ರ ಮಟ್ಟದಲ್ಲಿ ಮದ್ಯ ನಿಯಂತ್ರಣ ನೀತಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಮನವಿ ವಿಚಾರಣೆಗೂ ಪೀಠ ನಿರಾಕರಿಸಿತ್ತು. ಅದೂ ನೀತಿಯ ಭಾಗ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಸಂವಿಧಾನದ 21 ಮತ್ತು 47ನೇ ವಿಧಿಯ ಭಾಗವಾಗಿ ಮದ್ಯ ಸೇವನೆ, ಉತ್ಪಾದನೆ, ಹಂಚಿಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಲು ದೆಹಲಿ ಸರ್ಕಾರಕ್ಕೆ ಸೂಚಿಸಬೇಕು ಎಂದು ಉಪಾಧ್ಯಾಯ ಅವರ ಮನವಿಯಲ್ಲಿ ಕೋರಲಾಗಿತ್ತು.