Justices DY Chandrachud and MR Shah
Justices DY Chandrachud and MR Shah  
ಸುದ್ದಿಗಳು

ಆಮ್ಲಜನಕ ಮಿತಿ ಹೆಚ್ಚಳ: ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಿರಾಕರಣೆ, ಕೇಂದ್ರಕ್ಕೆ ಹಿನ್ನಡೆ

Bar & Bench

ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರವು ಕರ್ನಾಟಕಕ್ಕೆ ನೀಡುತ್ತಿರುವ ಆಮ್ಲಜನಕದ ಪಾಲನ್ನು 1200 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಬೇಕು ಎಂದು ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ನಿರಾಕರಿಸಿದೆ.

ಕರ್ನಾಟಕ ಹೈಕೋರಟ್‌ ಮೇ.5 ರಂದು ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಡಿ ವೈ ಚಂದ್ರಚೂಡ್‌ ಹಾಗೂ ನ್ಯಾ. ಎಂ ಆರ್‌ ಶಾ ಅವರಿದ್ದ ಪೀಠವು ಮಧ್ಯಪ್ರವೇಶಿಸಲು ನಿರಾಕರಿಸಿ ಆದೇಶ ನೀಡಿತು.

ಇಂದು ನಡೆದ ವಿಚಾರಣೆಯ ಆರಂಭದಲ್ಲಿ ಕೇಂದ್ರದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ಹೈಕೋರ್ಟ್‌ಗಳು ಈ ರೀತಿಯ ಆದೇಶವನ್ನು ನೀಡಿದರೆ, ಅದು ‘ಅನುಷ್ಠಾನ ಸಾಧ್ಯವಾಗದು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್‌, “ ನಾವು ಆದೇಶವನ್ನು ಓದಿದ್ದೇವೆ, ಘಟನಾವಳಿಗಳನ್ನೂ ಅರಿತಿದ್ದೇವೆ. ತೂಗಿನೋಡಿ, ಆಲೋಚನಾಪರವಾಗಿ ಅದೇಶವನ್ನು ನೀಡಲಾಗಿದೆ ಎಂದು ನಾವು ಹೇಳುತ್ತೇವೆ,” ಎಂದರು.

ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕೆಂದು ನ್ಯಾಯಪೀಠದ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಎಸ್‌ಜಿ ತುಷಾರ್ ಮೆಹ್ತಾ ವಿಫಲರಾದರು. “ನಾವು ಈ ಆದೇಶದಲ್ಲಿ ಇಂದು ಮಧ್ಯಪ್ರವೇಶಿಸುವುದಿಲ್ಲ. ಹೈಕೋರ್ಟ್‌ ತನ್ನ ಅಧಿಕಾರವನ್ನು ಸ್ಪಷ್ಟವಾಗಿ ಪರಿಗಣಿಸಿ ಚಲಾಯಿಸಿದೆ. ಒಂದು ವೇಳೆ ಅದು ಕಾರ್ಯಾಂಗದ ಅಧಿಕಾರದ ಅತಿಕ್ರಮಣವಾಗಿದ್ದರೆ ನಾವು ಆಗ ಪರಿಗಣಿಸುತ್ತಿದ್ದೆವು,” ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಶಬ್ದಗಳಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿತು.

ಆಗ, ತುಷಾರ್‌ ಮೆಹ್ತಾ ಅವರು, “ಇದು ಎಲ್ಲ ಹೈಕೋರ್ಟ್‌ಗಳು ಆಮ್ಲಜನಕದ ವಿತರಣೆಗೆ ಪರಿಶೀಲಿಸಲು ಮುಂದಾಗುವಂತೆ ಮಾಡುತ್ತದೆ… ದಯವಿಟ್ಟು ಇದನ್ನು ಉದಾಹರಣೆಯಾಗಿ ಪರಿಗಣಿಸಬಾರದು ಎಂದು ಆದೇಶಿಸಿ,” ಎಂದು ಅಲವತ್ತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್‌ ಅವರು, “ನಾವು ವಿಸ್ತೃತವಾದ ವಿಷಯದ ಬಗ್ಗೆ ಗಮನಿಸುತ್ತಿದ್ದೇವೆ. ಆದರೆ, ಈ ಮಧ್ಯೆ ಕರ್ನಾಟಕದ ನಾಗರಿಕರನ್ನು ಕೈಬಿಡಲಾಗದು,” ಎಂದರು.

ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕೇಂದ್ರವು, ಪ್ರತಿಯೊಂದು ರಾಜ್ಯಗಳಿಗೂ ನಿರ್ದಿಷ್ಟ ಪ್ರಮಾಣದ ಆಮ್ಲಜನಕವನ್ನು ವಿತರಿಸುವುದರ ಹಿಂದಿನ ತರ್ಕವನ್ನು ಅರ್ಥ ಮಾಡಿಕೊಳ್ಳುವಲ್ಲಿ ಕರ್ನಾಟಕ ಹೈಕೋರ್ಟ್‌ ವಿಫಲವಾಗಿದೆ ಎಂದು ವಾದಿಸಿತ್ತು.