ಸುದ್ದಿಗಳು

[ಎಲ್ಐಸಿ ಐಪಿಒ ಪ್ರಶ್ನಿಸಿದ್ದ ಅರ್ಜಿ] ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ: ನೋಟಿಸ್ ಜಾರಿ

"ನಾವು ಈಗ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ಐಪಿಒ ಪ್ರಕರಣಗಳಲ್ಲಿ, ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ಬಯಸುವುದಿಲ್ಲ. ಇದು ಹೂಡಿಕೆಗೆ ಸಂಬಂಧಿಸಿದ್ದು," ಎಂದು ಪೀಠ ಹೇಳಿದೆ.

Bar & Bench

ಜೀವ ವಿಮಾ ನಿಗಮದಲ್ಲಿರುವ (ಎಲ್‌ಐಸಿ) ತನ್ನ ಶೇ 5 ರಷ್ಟು ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ. [ಥಾಮಸ್ ಫ್ರಾಂಕೊ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಐಪಿಒ ಮೇ 4 ರಂದು ಪ್ರಾರಂಭವಾಗಿದ್ದು ಷೇರುಗಳ ಹಂಚಿಕೆ ಇಂದು ನಡೆಯಲಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತಾದರೂ ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿತು.

"ನಾವು ಈಗ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ಐಪಿಒ ಪ್ರಕರಣಗಳಲ್ಲಿ, ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ಬಯಸುವುದಿಲ್ಲ. ಇದು ಹೂಡಿಕೆಗೆ ಸಂಬಂಧಿಸಿದ್ದು" ಎಂದು ಪೀಠ ಹೇಳಿತು.

ಕಾನೂನನ್ನು ಹಣಕಾಸು ಮಸೂದೆಯಾಗಿ ಜಾರಿಗೊಳಿಸುವುದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು ಅದರೊಂದಿಗೆ ಈ ಪ್ರಕರಣವನ್ನು ಕೂಡ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು. ಬಳಿಕ ಮಧ್ಯಂತರ ಪರಿಹಾರ ನಿರಾಕರಿಸುವ ಆದೇಶ ಜಾರಿ ಮಾಡಲಾಯಿತು.

ಸಂವಿಧಾನದ 110ನೇ ತಿದ್ದುಪಡಿಯು ಹಣದ ಮಸೂದೆಯ ವರ್ಗದಲ್ಲಿ ಬರದಿದ್ದರೂ ಕೂಡ ಹಣಕಾಸು ಕಾಯಿದೆ- 2021 ಮತ್ತು ಜೀವ ವಿಮಾ ನಿಗಮ (ಎಲ್‌ಐಸಿ) ಕಾಯಿದೆ- 1956ರ ನಿಯಮಾವಳಿಗಳನ್ನು ಹಣಕಾಸು ಮಸೂದೆಯಡಿ ಜಾರಿಗೆ ತಂದಿರುವುದನ್ನು ಪ್ರಶ್ನಿಸಿ ಎಲ್‌ಐಸಿ ಪಾಲಿಸಿದಾರರೊಬ್ಬರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.