Supreme Court, NEET-PG 2023
Supreme Court, NEET-PG 2023 
ಸುದ್ದಿಗಳು

ನೀಟ್ ಪಿಜಿ- 2023 ಮುಂದೂಡಿಕೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

Bar & Bench

ಬರುವ ಮಾರ್ಚ್ 5ಕ್ಕೆ ನಿಗದಿಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶಾತಿ ಸ್ನಾತಕೋತ್ತರ ಪರೀಕ್ಷೆ (ನೀಟ್‌- ಪಿಜಿ)  ಮುಂದೂಡಬೇಕೆಂದು ಹದಿನೇಳು ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಡಾ. ಗಣೇಶ್‌ ಪವಾರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ರಾಜ್ಯ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಮಾಲೋಚಿಸದೆ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಎರಡು ಬಾರಿ ಅರ್ಹತಾ ಮಾನದಂಡಗಳನ್ನು ಮಾರ್ಪಡಿಸಿರುವುದು ಸ್ಪಷ್ಟ ಲೋಪ. ಇದರಿಂದಾಗಿ ಅಭ್ಯರ್ಥಿಗಳಿಗೆ ತಯಾರಿ ನಡೆಸಲು ಸೂಕ್ತ ಸಮಯ ದೊರೆಯಲಿಲ್ಲ ಎಂದು ಅರ್ಜಿದಾರರು ದೂರಿದ್ದರು.

ಎನ್‌ಬಿಇ ತಪ್ಪಿನಿಂದಾಗಿ ಅಭ್ಯರ್ಥಿಗಳು ತೊಂದರೆ ಅನುಭವಿಸಬಾರದು. ಅರ್ಹತೆಯ ಪ್ರಮುಖ ಅಂಶಗಳಲ್ಲೊಂದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ವೈದ್ಯಕೀಯ ಮಂಡಳಿಗಳೊಂದಿಗೆ ಪರಿಶೀಲಿಸದೆ ಎನ್‌ಬಿಇ ದೋಷಯುಕ್ತ ನೋಟಿಸ್‌ ನೀಡಿದೆ…” ಎಂದು ಅರ್ಜಿದಾರರು ವಿವರಿಸಿದ್ದರು.

ಮತ್ತೆ ಪರೀಕ್ಷೆ ಬರೆಯುವುದನ್ನು ಯಾರೂ ತಡೆಯುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ತಿಳಿಸಿತು.

“ಜಗತ್ತಿನಲ್ಲಿ ಮರಳಿ ಯತ್ನ ಮಾಡುವುದಕ್ಕೆ ಯಾವುದೂ ಅಡ್ಡಿಯಾಗದು… ಇದು (ನೀಟ್‌ ಮಾನದಂಡಗಳು) ಸದಾ ವಿಕಸನಶೀಲ ಪ್ರಕ್ರಿಯೆ. ಕೆಲವೊಮ್ಮೆ ತಪ್ಪಾಗಬಹುದು” ಎಂದು ಪೀಠ ಹೇಳಿತು.

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ಅವರು ಆಡಳಿತಾತ್ಮಕ ವ್ಯವಸ್ಥೆಗಳು ಸಿದ್ಧಗೊಂಡಿದ್ದು ತಂತ್ರಜ್ಞಾನ ಪಾಲುದಾರರು ಬೇರೆ ದಿನಾಂಕದಂದು ಪರೀಕ್ಷೆ ನಡೆಸಲು ಲಭ್ಯವಾಗುವುದಿಲ್ಲ ಎಂದು ತಿಳಿಸಿದರು. ಕಳೆದ ವರ್ಷ ವೇಳಾಪಟ್ಟಿ ಸಡಿಲಿಕೆ ಮಾಡಿರುವುದನ್ನು ವಿವರಿಸಿದ ಅವರು ಈ ಬಾರಿ ಕೋವಿಡ್‌ಗೆ ಮೊದಲಿನ ವರ್ಷಗಳಲ್ಲಿದ್ದ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲು ಸರ್ಕಾರ ಯತ್ನಿಸುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.