New Criminal Laws and Lawyers  
ಸುದ್ದಿಗಳು

ಮೂರು ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಪಿಐಎಲ್ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ಕಾನೂನು ಜಾರಿಗೆ ಬಂದಿಲ್ಲ. ಅಕಾಲಿಕವಾಗಿ ಇಂತಹ ಮನವಿಗಳನ್ನು ಹೇಗೆ ಸಲ್ಲಿಸುತ್ತೀರಿ ಎಂದು ಅರ್ಜಿದಾರ ವಿಶಾಲ್ ತಿವಾರಿ ಅವರನ್ನು ನ್ಯಾ. ಮಿತ್ತಲ್ ಪ್ರಶ್ನಿಸಿದರು.

Bar & Bench

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಜಾರಿಗೆ ತರಲಾಗುತ್ತಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (PIL) ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ವಿಶಾಲ್‌ ತಿವಾರಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಹೊಸ ಕ್ರಿಮಿನಲ್ ಕಾನೂನುಗಳು ಇನ್ನೂ ಜಾರಿಗೆ ಬರದೆ ಇರುವುದರಿಂದ ಇಂತಹ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಕಾನೂನು ಜಾರಿಗೆ ಬಂದಿಲ್ಲ. ಅಕಾಲಿಕವಾಗಿ ಇಂತಹ ಮನವಿಗಳನ್ನು ಹೇಗೆ ಸಲ್ಲಿಸುತ್ತೀರಿ ಎಂದು ಅರ್ಜಿದಾರ ವಿಶಾಲ್ ತಿವಾರಿ ಅವರನ್ನು ನ್ಯಾ. ಮಿತ್ತಲ್‌ ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ತಿವಾರಿ ಅರ್ಜಿ ಹಿಂಪಡೆಯಲು ನಿರ್ಧರಿಸಿದರು.

ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ವಜಾಗೊಳಿಸಿತ್ತು. ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಇರುವ ಅರ್ಹತೆಯನ್ನು ಪ್ರಶ್ನಿಸಿದ್ದ ಅದು ಕಾನೂನು ಇನ್ನೂ ಜಾರಿಗೆ ಬಂದಿಲ್ಲ ಎಂದು ಹೇಳಿತ್ತು.

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಆಗಸ್ಟ್ 11, 2023 ರಂದು ಲೋಕಸಭೆಯಲ್ಲಿ ಮೊದಲಿಗೆ ಮಂಡಿಸಲಾಗಿತ್ತು.

ಅವುಗಳನ್ನು ಡಿಸೆಂಬರ್ 20ರಂದು ಲೋಕಸಭೆ ಹಾಗೂ ಡಿಸೆಂಬರ್ 21ರಂದು ರಾಜ್ಯಸಭೆ ಕ್ರಮವಾಗಿ ಅಂಗೀಕರಿಸಿದ್ದವು.

ತರುವಾಯ, ಫೆಬ್ರವರಿ 24 ರಂದು ಕೇಂದ್ರ ಗೃಹ ಸಚಿವಾಲಯವು ಗೆಜೆಟ್ ಅಧಿಸೂಚನೆ ಹೊರಡಿಸಿ ಬರುವ ಜುಲೈ 1ರಿಂದ ಹೊಸ ಕಾನೂನುಗಳು ಜಾರಿಗೆ ಬರಲಿವೆ ಎಂದು ಘೋಷಿಸಿತ್ತು.