clat 2021
clat 2021 
ಸುದ್ದಿಗಳು

ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ ಸಿಎಲ್ಎಟಿ- 2021 ಮುಂದೂಡಿಕೆ ಕೋರಿದ್ದ ಅರ್ಜಿ ತಿರಸ್ಕರಿಸಿದ ʼಸುಪ್ರೀಂʼ

Bar & Bench

ಜುಲೈ 23 ರಂದು ನಡೆಯಬೇಕಿದ್ದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) 2021 ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಇದು ಸುಮಾರು 80,000 ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆ ಸೃಷ್ಟಿಸುವುದರಿಂದ ಅರ್ಜಿಯನ್ನು ಕೊನೆಯ ಕ್ಷಣದಲ್ಲಿ ಸಲ್ಲಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಈ ವೇಳೆ ಹೇಳಿತು.

"ಜುಲೈ 23ರಂದು ಪರೀಕ್ಷೆ ನಿಗದಿಯಾಗಿದ್ದು ಈ ಹಂತದಲ್ಲಿ ಮುಂದೂಡಿಕೆ ಸೂಕ್ತವೆಂದು ನಾವು ಭಾವಿಸುವುದಿಲ್ಲ. ಆದರೂ, ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಅರ್ಜಿದಾರರ ವಾದದಲ್ಲಿ ಹುರುಳಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರೋಗ್ಯ ಕಾಪಾಡಿಕೊಳ್ಳಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಒತ್ತಾಯಿಸಬಾರದು” ಎಂಬುದಾಗಿ ನ್ಯಾಯಾಲಯ ಹೇಳಿದೆ.

2021ರ ಜೂನ್ 14ರಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ನೀಡಿದ ಅಧಿಸೂಚನೆ ಸ್ವೇಚ್ಛೆಯಿಂದ ಕೂಡಿದ್ದು ಕಾನೂನುಬಾಹಿರವಾಗಿದೆ. ಏಕೆಂದರೆ ಜುಲೈ 23ರಂದು ಭೌತಿಕವಾಗಿ ನಡೆಯುವ ಪರೀಕ್ಷೆಯು ಲಸಿಕೆ ಹಾಕಿಸಿಕೊಳ್ಳದೇ ಇರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ಇದೆ. ಅವರಿಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಅಲ್ಲದೆ ಮೂರನೇ ಅಲೆಗೆ ಸಂಬಂಧಿಸಿದಂತೆ ದೇಶದ ಹಲವು ಸಂಸ್ಥೆಗಳು ನೀಡಿದ ಎಚ್ಚರಿಕೆಗಳನ್ನು ಒಕ್ಕೂಟ ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಕೋವಿಡ್‌ ಪರಿಸ್ಥಿತಿ ಸಹಜವಾಗುವವರೆಗೆ, ಪರೀಕ್ಷೆ ನಡೆಸುವ ಪರ್ಯಾಯ ಸುರಕ್ಷಿತಾ ವಿಧಾನ ರೂಪಿಸುವವರೆಗೆ ಪರೀಕ್ಷೆ ಮುಂದೂಡಲು ಒಕ್ಕೂಟಕ್ಕೆ ನಿರ್ದೇಶಿಸುವಂತೆ ವಕೀಲ ಕುನಾಲ್ ಚಟರ್ಜಿ ಅವರು ಸಲ್ಲಿಸಿದ ಮನವಿಯಲ್ಲಿ ಕೋರಲಾಗಿತ್ತು.

ಆದರೆ ಈ ಸಮಯದಲ್ಲಿ ಪರೀಕ್ಷೆ ರದ್ದುಗೊಳಿಸಿದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂಬ ನೆಲೆಯಲ್ಲಿ ಪೀಠ ಮನವಿಯನ್ನು ವಜಾಗೊಳಿಸಿತು.