ದೇಶದಾದ್ಯಂತ ದೇವಾಲಯಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ 'ವಿಐಪಿ'ಗಳಿಗೆ ವಿಶೇಷ ದರ್ಶನ ಅವಕಾಶ ಕಲ್ಪಿಸುವ ಪ್ರವೃತ್ತಿಯ ವಿರುದ್ಧ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ವಿಜಯ್ ಕಿಶೋರ್ ಗೋಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ].
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಅಂತಹ ವಿಶೇಷ ಆದ್ಯತಾ ಉಪಚಾರವನ್ನು ನೀಡಬಾರದು ಎಂದು ಅಭಿಪ್ರಾಯಪಟ್ಟರೂ, ನ್ಯಾಯಾಲಯವು ಈ ವಿಷಯದ ಬಗ್ಗೆ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
"ನಾವು ಇದನ್ನು ಪುರಸ್ಕರಿಸುವುದಿಲ್ಲ. ಯಾವುದೇ ವಿಶೇಷ ಆದ್ಯತೆ ನೀಡಬಾರದು ಎನ್ನುವುದು (ನಮ್ಮ) ಅಭಿಪ್ರಾಯ ಆದರೂ ಸಹ ಈ ನ್ಯಾಯಾಲಯವು ಆರ್ಟಿಕಲ್ 32 ರ ಅಡಿಯಲ್ಲಿ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ" ಎಂದು ಪೀಠವು ಹೇಳಿದೆ.
ಆದರೆ, ಇದೇ ವೇಳೆ ಪೀಠವು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳಲು ತನ್ನ ಆದೇಶ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ದೇಶಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ದರ್ಶನ ಹಾಗೂ ಹಣ ನೀಡಿ ಪಡೆಯುವ ದರ್ಶನಗಳಿಗೆ ಅವಕಾಶ ಕಲ್ಪಿಸುವ ಪ್ರವೃತ್ತಿ ವ್ಯಾಪಕವಾಗಿರುವದನ್ನು ಪ್ರಶ್ನಿಸಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು ಅಂತಹ ಸ್ಥಳಗಳಲ್ಲಿ ಕಾಲ್ತುಳಿತಗಳನ್ನು ಸಂಭವಿಸಿರುವ ಇತ್ತೀಚಿನ ಉದಾಹರಣೆಗಳನ್ನು ಸಹ ಉಲ್ಲೇಖಿಸಿದ್ದಾರೆ. "ಆದ್ಯತೆಯ ಮೇರೆ ವಿಶೇಷ ಪ್ರವೇಶಾವಕಾಶಗಳನ್ನು ನೀಡಲಾಗುತ್ತಿದೆ. ಇದು ಕಾಲ್ತುಳಿತಗಳನ್ನು ಸಹ ಸೃಷ್ಟಿಸಿದೆ. ಈ ಬಗೆಯ ಅಸಮಾನತೆಯನ್ನು ತೊಡೆಯಲು ರಾಜ್ಯಗಳಿಗೆ ಸಾಂವಿಧಾನಿಕವಾದ ಬಾಧ್ಯತೆ ಇದೆ" ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.