ಸುದ್ದಿಗಳು

ಅವರು ಕಚೇರಿ ತೊರೆದಿದ್ದಾರೆ, ಈಗೇನೂ ಮಾಡಲಾಗದು: ನಿವೃತ್ತ ಸಿಜೆಐ ವಿಚಾರಣೆ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ

Bar & Bench

ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧ ಆಂತರಿಕ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ಇಂದು ವಜಾ ಮಾಡಿದೆ. ಅವರು ಕಚೇರಿಯನ್ನು ತೊರೆದಿರುವುದರಿಂದ ಪ್ರಕರಣದ ವಿಚಾರಣೆ ನಿರರ್ಥಕ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಅರುಣ್‌ ರಾಮಚಂದ್ರ ಹುಬ್ಳೀಕರ್‌ ಎನ್ನುವವರು 2018ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಅರ್ಜಿಯು ಗೊಗೊಯ್‌ ಅವರು ನಿವೃತ್ತಿಯಾದ ಕೆಲ ತಿಂಗಳ ನಂತರ ವಿಚಾರಣೆಗೆ ಬಂದಿತ್ತು. ವಿಚಾರಣೆಗೂ ಮುನ್ನ ಪೀಠವು ಅನೌಪಚಾರಿಕವಾಗಿ ಅರ್ಜಿಯಲ್ಲಿನ ನಿವೇದನೆಯು ಪ್ರಸ್ತುತ ನಿರರ್ಥಕ ಎಂದು ಅಭಿಪ್ರಾಯಪಟ್ಟಿತು. ಆದರೂ, ಅರ್ಜಿದಾರರು ತಮ್ಮ ವಾದವನ್ನು ಮಂಡಿಸಲು ಮುಂದಾದರು.

ಆಂತರಿಕ ಸಮಿತಿಯೊಂದನ್ನು ರಚಿಸುವ ಮೂಲಕ ಗೊಗೊಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾವು ನಿವೇದಿಸಿಕೊಂಡಿರುವುದಾಗಿ ಅರ್ಜಿದಾರರು ತಿಳಿಸಿದರು. ನಿವೃತ್ತ ಸಿಜೆಐ ಅವರು ತಮ್ಮ ಅಧಿಕಾರಾವದಿಯಲ್ಲಿ “ಮಾಡುವ ಅಥವಾ ಬಿಡುವ” (ಕಮಿಷನ್ ಅಂಡ್ ಒಮಿಷನ್) ತಮ್ಮ ಕ್ರಿಯೆಗಳಿಂದ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಪಕ್ಷಪಾತ ಮತ್ತು ಅನೌಚಿತ್ಯತೆಯ ಚರ್ಚೆಗಳಿಗೆ ತುತ್ತಾದ ಅವರ ಅವಧಿಯಲ್ಲಿನ ಆದೇಶಗಳನ್ನು ಅರ್ಜಿದಾರರು ಉದಾಹರಿಸಲು ಮುಂದಾದರು.

ಈ ವೇಳೆ ಪೀಠವು, ಗೊಗೊಯ್‌ ಅವರು ಕಚೇರಿಯನ್ನು ತೊರೆಯುವುದರೊಂದಿಗೆ ನಿವೇದನೆಯು ನಿರರ್ಥಕಾರಿಯಾಗಿದ್ದು ಪ್ರಸ್ತುತ ಅಂತಹ ಯಾವುದೇ ವಿಚಾರಣೆಯನ್ನು ಮಾಡಲು ಆದೇಶಿಸಲಾಗದು ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿತು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಮಿಶ್ರಾ ಅವರು, ಪಿಐಎಲ್‌ ವಿಳಂಬವಾಗಲು ಕಾರಣವನ್ನು ಕೇಳಿದರು. ಇದಕ್ಕೆ ಅರ್ಜಿದಾರರು ಎರಡು ವರ್ಷದ ಹಿಂದೆಯೇ ಅರ್ಜಿ ದಾಖಲಿಸಿ, ರೆಜಿಸ್ಟ್ರಿಗೆ “ಡಜನ್‌ ಗಟ್ಟಲೆ" ಪತ್ರಗಳನ್ನು ಬರೆದರೂ ಅದನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.