Supreme Court of India 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ ಕೇರಳ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಸುಪ್ರೀಂ ನಕಾರ

ನ್ಯಾಯಾಂಗ ಅಧಿಕಾರಿಯ ಕಾರ್ಯಭಾರದ ಒತ್ತಡದಿಂದಾಗಿ ಕಣ್ತಪ್ಪಿನಿಂದ ತಪ್ಪಾಗಿರಬಹುದು ಎಂದು ಹೇಳಿದ ನ್ಯಾಯಾಲಯ.

Bar & Bench

ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಆದೇಶದಲ್ಲಿ ಬಹಿರಂಗಪಡಿಸಿರುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ನಿರಾಕರಿಸಿದ ಕೇರಳ ಹೈಕೋರ್ಟ್‌ ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ನ್ಯಾಯಾಂಗ ಅಧಿಕಾರಿಯ ಕಾರ್ಯಭಾರದ ಒತ್ತಡದಿಂದಾಗಿ ಕಣ್ತಪ್ಪಿನಿಂದ ತಪ್ಪಾಗಿರಬಹುದು ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠವು ಮೌಖಿಕವಾಗಿ ಹೇಳಿದೆ.

“ನ್ಯಾಯಾಂಗ ಅಧಿಕಾರಿಯ ವಿರುದ್ದ ನಮಗೆ ಪ್ರತೀಕಾರ ಭಾವನೆ ಇದೆಯೇ? ನಾವು ಹಲವು ಪ್ರಕರಣಗಳ ವಿಚಾರಣೆ ನಡೆಸಬೇಕಿದ್ದು, ನಾವು ಸಹ ತಪ್ಪು ಮಾಡುತ್ತೇವೆ. ನಾವು ದಂಡ ವಿಧಿಸಬೇಕು ಎಂದು ನೀವು ಭಾವಿಸುತ್ತೀರಾ?” ಎಂದು ಮ್ಯಾಜಿಸ್ಟ್ರೇಟ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ವಕೀಲರ ಕುರಿತು ನ್ಯಾ. ರಾಯ್‌ ಹೇಳಿದರು.

ಕೇರಳದ ಕಟ್ಟಕ್ಕಡದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಲು ಮ್ಯಾಜಿಸ್ಟ್ರೇಟ್‌ ನಿರಾಕರಿಸಿದ ಪ್ರಕರಣ ಇದಾಗಿದೆ. ಇದೇ ಆದೇಶದಲ್ಲಿ ಮ್ಯಾಜಿಸ್ಟ್ರೇಟ್‌ ಅವರು ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದರು.

ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಬಾರದು ಎಂಬ ನಿಯಮ ಇದ್ದರೂ ಅದನ್ನು ಬಹಿರಂಗಪಡಿಸಿರುವುದಕ್ಕೆ ನ್ಯಾಯಾಂಗ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತೆ ಕೋರಿದ್ದರು.