ಕೇಂದ್ರ ಲೋಕಸೇವಾ ಆಯೋಗ 
ಸುದ್ದಿಗಳು

ಇವರು ಸಾರ್ವಜನಿಕ ಸೇವಕರಾಗುವವರು, ವಿದ್ಯಾರ್ಥಿಗಳಲ್ಲ: ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

ಒಂದು ಪರೀಕ್ಷಾ ಕೇಂದ್ರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ ಎಂದು ನ್ಯಾಯಾಲಯವು ಕೇಂದ್ರ ಲೋಕಸೇವಾ ಆಯೋಗಕ್ಕೆ ಸೂಚಿಸಿದೆ.

Bar & Bench

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ ಸಿ) ಅಕ್ಟೋಬರ್ 4ಕ್ಕೆ ನಿಗದಿಗೊಳಿಸಿರುವ ಪೂರ್ವಭಾವಿ ಪರೀಕ್ಷೆ ಮುಂದೂಡಲು ನಿರ್ದೇಶನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕೊನೆಯ ಬಾರಿಗೆ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮದಲ್ಲಿ ಸಡಿಲಿಕೆ ಮಾಡುವುದನ್ನು ಪರಿಗಣಿಸುವಂತೆ ಯುಪಿಎಸ್‌ಸಿಗೆ ನ್ಯಾಯಾಲಯ ಸೂಚಿಸಿದೆ.

ಕೋವಿಡ್ ಸಾಂಕ್ರಾಮಿಕತೆಯಿಂದ ಉದ್ಭವಿಸಿರುವ ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸಿ ಪರೀಕ್ಷೆ ಮುಂದೂಡಲು ಯುಪಿಎಸ್‌ಸಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ವಾದದಿಂದ ಸಂತುಷ್ಟಗೊಳ್ಳದ ನ್ಯಾಯಾಲಯವು, ಪರೀಕ್ಷೆ ನಡೆಸಲು ಯುಪಿಎಸ್‌ಸಿ ಕೈಗೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ ಗಮನಹರಿಸಿ ಪರೀಕ್ಷೆ ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ಅಮಾನ್ಯ ಮಾಡಿತು.

“... ಪ್ರತಿ ವರ್ವವೂ ಏನಾದರೂ ಸಮಸ್ಯೆಗಳು ಇದ್ದೇ ಇರುತ್ತವೆ. ಉದಾಹರಣೆಗೆ ಪರಿಸರ ಪ್ರಕೋಪ ಇತ್ಯಾದಿ. ಇಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿಲ್ಲ. ಬದಲಿಗೆ ಸಾರ್ವಜನಿಕ ಸೇವಕರಾಗುವವರು ಪರೀಕ್ಷೆ ಬರೆಯಲಿದ್ದು, ಅವರು ಅದೇ ರೀತಿ ವರ್ತಿಸಬೇಕು. ನಿಮ್ಮ ಗೂಡಿನಿಂದ, ಸುರಕ್ಷಿತ ವಲಯದಿಂದ ಹೊರಬನ್ನಿ.”
ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ವಿಚಾರಣೆ ಕೈಗೊಂಡು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ ಬರೆಯಲು ಆಗದಿದ್ದವರಿಗೆ ಮತ್ತೊಂದು ಅವಕಾಶ ಕಲ್ಪಿಸುವ ಬಗ್ಗೆ ಯುಪಿಎಸ್‌ಸಿ ಪರಿಗಣಿಸಬಹುದು. ವಯೋಮಿತಿಯನ್ನು ಹೆಚ್ಚಿಸದೇ ಈ ಅವಕಾಶ ಕಲ್ಪಿಸಬೇಕು ಎಂದಿತು.

ಪ್ರವೇಶ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡುವಂತೆ ಯುಪಿಎಸ್‌ಸಿಗೆ ಸೂಚಿಸಿದೆ. ರಾಜ್ಯದಿಂದ ರಾಜ್ಯಕ್ಕೆ ಎಸ್‌ಒಪಿ ಮಾರ್ಗಸೂಚಿ ಜಾರಿಯಲ್ಲಿ ವ್ಯತ್ಯಾಸವಾಗಿರುವುದರಿಂದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.

ಕೋವಿಡ್‌ಗೆ ತುತ್ತಾಗಿರುವವರನ್ನು ಪರೀಕ್ಷಾ ಕೊಠಡಿಗೆ ಸೇರಿಸಬಾರದು ಎಂದು ಯಾವುದೇ ನಿರ್ದಿಷ್ಟ ಆದೇಶ ಹೊರಡಿಸದೇ ನ್ಯಾಯಾಲಯವು ಹೇಳಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಯುಪಿಎಸ್‌ಸಿ ಕಡ್ಡಾಯವಾಗಿ ಅನುಸರಿಬೇಕು. ಮಾರ್ಗಸೂಚಿಯಲ್ಲಿ ಸಮಸ್ಯೆಗಳಿದ್ದರೆ ಗೃಹ ಸಚಿವಾಲಯವು ಪೂರಕ ಮಾರ್ಗಸೂಚಿ ಹೊರಡಿಸಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

ಈ ವರ್ಷದ ಪೂರ್ವಭಾವಿ ಪರೀಕ್ಷೆಯನ್ನು ಮುಂದಿನ ವರ್ಷದ ಪೂರ್ವಭಾವಿ ಪರೀಕ್ಷೆಯ ಜೊತೆಗೆ ಮಿಳಿತಗೊಳಿಸುವ ವಿಚಾರವನ್ನು ನ್ಯಾಯಾಲಯವು ನಿರಾಕರಿಸಿದ್ದು, ಇದು ವಿಭಿನ್ನ ಸಮಸ್ಯೆ ತಂದೊಡ್ಡು ಸಾಧ್ಯತೆ ಇದೆ ಎಂದಿತು. ಇದಕ್ಕೆ ಬದಲಾಗಿ ಅಭ್ಯರ್ಥಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದು, ಶಿಷ್ಟಾಚಾರದ ಅನ್ವಯ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದು ಪರೀಕ್ಷಾ ಕೊಠಡಿಯಲ್ಲಿ ಇರುವಂತಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಗೆ ಅಫಿಡವಿಟ್ ಸಲ್ಲಿಸಿದ್ದ ಯುಪಿಎಸ್‌ಸಿಯು ಕೋವಿಡ್ ಹಿನ್ನೆಲೆಯಲ್ಲಿ ಅಕ್ಟೋಬರ್ 4ಕ್ಕೆ ನಿಗದಿಯಾಗಿರುವ ನಾಗರಿಕ ಸೇವಾ ಪೂರ್ವಭಾವಿ-2020 ಪರೀಕ್ಷೆಗಳನ್ನು ಮುಂದೂಡಲಾಗದು. ಹೀಗೆ ಮಾಡಿದರೆ 2021ರ ಜೂನ್ 27ಕ್ಕೆ ನಿಗದಿಯಾಗಿರುವ ಮುಂದಿನ ವರ್ಷದ ಪೂರ್ವಭಾವಿ ಪರೀಕ್ಷೆಯನ್ನೂ ಮುಂದೂಡಬೇಕಾಗುತ್ತದೆ ಎಂದಿತ್ತು.

ಈಗಾಗಲೇ 2021ಕ್ಕೆ ನಿಗದಿಯಾಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡದೆ 2020ರ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗದು ಎಂದಿರುವ ಆಯೋಗವು ಪರೀಕ್ಷೆ ಮುಂದೂಡದಂತೆ ಅಭ್ಯರ್ಥಿಗಳು ಇಮೇಲ್‌ ಮತ್ತು ಮನವಿಗಳನ್ನು ಕಳುಹಿಸಿದ್ದಾರೆ ಎಂದಿದ್ದು, ಅಫಿಡವಿಟ್ ಜೊತೆಗೆ ವಿನಂತಿಗಳನ್ನು ಲಗತ್ತಿಸಿರುವುದಾಗಿ ತಿಳಿಸಿದೆ.

ಸುಮಾರು 67,717 ಅಭ್ಯರ್ಥಿಗಳಿಗೆ ತಮ್ಮ ಇಚ್ಛೆಯ ಕೇಂದ್ರ ಆಯ್ದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ₹50.39 ಕೋಟಿ ಸಾರ್ವಜನಿಕ ಹಣವನ್ನು ಅಕ್ಟೋಬರ್ 4ರಂದು ಪರೀಕ್ಷೆ ನಡೆಸಲು ಖರ್ಚು ಮಾಡಲಾಗಿದೆ. ಸೆಪ್ಟೆಂಬರ್ 6ರಂದು ಯಶಸ್ವಿಯಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾಪಡೆಯ ಅಕಾಡೆಮಿ ಪರೀಕ್ಷೆಗಳನ್ನು ನಡೆಸಲಾಗಿದೆ. ಎನ್‌ಡಿಎ ಪರೀಕ್ಷೆಯಲ್ಲಿ 12ನೇ ತರಗತಿ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ, ಅಕ್ಟೋಬರ್ 4ರಂದು ನಡೆಯಲಿರುವ ಪರೀಕ್ಷೆಯಲ್ಲಿ ಪದವೀಧರರು ಭಾಗವಹಿಸುತ್ತಾರೆ. “ಇವರಿಂದ ಹೆಚ್ಚಿನ ಜವಾಬ್ದಾರಿಯುತ ನಡತೆ ಮತ್ತು ಜಾಗ್ರತೆ” ನಿರೀಕ್ಷಿಸಬಹುದಾಗಿದೆ ಎಂದು ಆಯೋಗ ತಿಳಿಸಿದೆ.

ಯುಪಿಎಸ್‌ಸಿ ಪ್ರತಿನಿಧಿಸಿರುವ ವಕೀಲ ನರೇಶ್ ಕೌಶಿಕ್ ಅವರು “ಅಕ್ಟೋಬರ್ 4ರ ಆಚೆಗೆ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ. ಇದರಿಂದ ಪರೀಕ್ಷೆ ನಡೆಸುವ ಉದ್ದೇಶಗಳಿಗೆ ಹೊಡೆತ ಬೀಳಲಿದೆ” ಎಂದು ವಾದಿಸಿದ್ದಾರೆ.

ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಯುಪಿಎಸ್‌ಸಿಯ ಪರಿಷ್ಕೃತ ಕ್ಯಾಲೆಂಡರ್ ಅನ್ನು ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ಅಥವಾ ಮೂರು ತಿಂಗಳು ಪರೀಕ್ಷೆ ಮುಂದೂಡುವಂತೆ ಕೋರಲಾಗಿದೆ. ಈ ಪ್ರಮುಖ ಅರ್ಜಿಯ ಜೊತೆಗೆ ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ತಂದೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಅಧಿಕಾರಿಯಾದ ಪುತ್ರ ನಾಗರಿಕ ಸೇವೆಗೆ ಸಿದ್ಧತೆ ನಡೆಸಲು ಮುಂದಾಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚುವರಿ ಕೆಲಸ ಇರುವುದರಿಂದ ಅವರ ಸಿದ್ಧತೆಗೆ ಸಮಸ್ಯೆಯಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.