DK Shivakumar, CBI and Supreme Court 
ಸುದ್ದಿಗಳು

ಡಿಸಿಎಂ ಡಿಕೆಶಿ ವಿರುದ್ಧ ಸಿಬಿಐ ನಡೆಸುತ್ತಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸಲು ಸುಪ್ರೀಂ ನಕಾರ

Bar & Bench

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ನಡೆಸುತ್ತಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ತನಿಖೆ ನಡೆಸಲು ಸಿಬಿಐಗೆ ಅನುಮತಿಸಿದ್ದ ಬಿಜೆಪಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೆಲಾ ಎಂ. ತ್ರಿವೇದಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ವಿಭಾಗೀಯ ಪೀಠವು ವಜಾಗೊಳಿಸಿದೆ.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿಸಿರುವುದನ್ನು ಹೈಕೋರ್ಟ್‌ಗೆ ತಡೆಯಲು ಸಾಧ್ಯ? ಇದನ್ನು ಕೇಳಿಯೇ ಇಲ್ಲ” ಎಂದಿತು.

ಆಗ ಡಿ ಕೆ ಶಿವಕುಮಾರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಈಗಾಗಲೇ ಹಿಂಪಡೆಯಲಾಗಿದೆ” ಎಂದರು.

ಆಗ ನ್ಯಾ. ತ್ರಿವೇದಿ ಅವರು “ಅದು ಬೇರೆ ವಿಚಾರ. ಹೈಕೋರ್ಟ್‌ ಹೇಗೆ ಸಿಬಿಐ ತನಿಖೆಗೆ ತಡೆ ವಿಧಿಸಿ ಆದೇಶಿಸಿದೆ?” ಎಂದರು.

ಆಗ ರೋಹಟ್ಗಿ ಅವರು “ನಮ್ಮ ಮುಂದೆ ಹೊಸ ಪ್ರಶ್ನೆ ಇದೆ. ಪಿತೂರಿಯನ್ನು ಪ್ರೆಡಿಕೇಟ್‌ ಅಪರಾಧ (ಅಕ್ರಮ ಹಣ ವರ್ಗಾವಣೆಗೆ ಕಾರಣವಾದ ಮೂಲ ಪ್ರಕರಣ) ಎನ್ನುವುದಾದರೆ ಅದು ಪ್ರತ್ಯೇಕ ಅಪರಾಧವಾಗಲಾರದು ಮತ್ತು ಇದಕ್ಕೆ ಬೇರೆ ಅಪರಾಧವನ್ನೂ ಸೇರ್ಪಡೆ ಮಾಡಬೇಕು ಎಂದು (ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಬೆಲಾ ತ್ರಿವೇದಿ ಅವರ ಭಿನ್ನಮತದ ತೀರ್ಪು ಉಲ್ಲೇಖಿಸಿ) ಸುಪ್ರೀಂ ಕೋರ್ಟ್‌ ಹೇಳಿದೆ” ಎಂದರು.

ಆಗ ನ್ಯಾ. ತ್ರಿವೇದಿ ಅವರು “ಭಿನ್ನಮತದ ತೀರ್ಪು ಆಧರಿಸಿ ನಾವು ಪ್ರಕರಣ ರದ್ದುಪಡಿಸಲಾಗದು” ಎಂದರು.

ಈ ಹಂತದಲ್ಲಿ ರೋಹಟ್ಗಿ ಅವರು “ಡಿ ಕೆ ಶಿವಕುಮಾರ್‌ ವಿರುದ್ಧ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ” ಎಂದು ಪೀಠದ ಗಮನಸೆಳೆದರು.

ಆಗ ನ್ಯಾಯಾಲಯವು “ಡಿ ಕೆ ಶಿವಕುಮಾರ್‌ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿಯೂ ತನಿಖೆ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯು ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ತನಿಖೆ ನಡೆಸಲಾಗದು. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸಲಾಗದು. ಅರ್ಜಿ ವಜಾ ಮಾಡಲಾಗಿದೆ” ಎಂದಿತು.

2013-2018ರ ಅವಧಿಯಲ್ಲಿ ಡಿ ಕೆ ಶಿವಕುಮಾರ್‌ ಅವರು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸಿಬಿಐ 2020ರ ಅಕ್ಟೋಬರ್‌ 3ರಂದು ಪ್ರಕರಣ ದಾಖಲಿಸಿತ್ತು.

2013ರಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬದ ಚರ ಮತ್ತು ಸ್ಥಿರ ಆಸ್ತಿಯು ₹33.92 ಕೋಟಿ ಇತ್ತು. 2018ರ ವೇಳೆಗೆ ₹128.6 ಕೋಟಿ ಸಂಪಾದನೆಯಾಗಿದ್ದು, 2018ರ ಏಪ್ರಿಲ್‌ 30ರ ವೇಳೆಗೆ ಅದು ₹162.53 ಏರಿಕೆಯಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠವು 2023ರ ಅಕ್ಟೋಬರ್‌ನಲ್ಲಿ ಸಿಬಿಐ ತನಿಖೆ ಪ್ರಶ್ನಿಸಿದ್ದ ಡಿ ಕೆ ಶಿವಕುಮಾರ್‌ ಅರ್ಜಿ ವಜಾ ಮಾಡಿತ್ತು. ಆನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಬಿಐಗೆ ಬಿಜೆಪಿ ಸರ್ಕಾರ ಅನುಮತಿಸಿದ್ದ ಆದೇಶವನ್ನು ಹಿಂಪಡೆದಿತ್ತು. ಈಗ ರಾಜ್ಯ ಸರ್ಕಾರದ ಆದೇಶವನ್ನು ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದರ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಕಾಯ್ದಿರಿಸಿದೆ.