ಸುದ್ದಿಗಳು

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ವಜಾ ಮಾಡಲು ಸುಪ್ರೀಂ ಕೋರ್ಟ್‌ ನಕಾರ

ಭ್ರಷ್ಟಾಚಾರ ಪ್ರತಿಬಂಧಕ ತಿದ್ದುಪಡಿ ಕಾಯಿದೆ ಅಡಿ ರಕ್ಷಣೆ ಕೋರಿ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

Bar & Bench

ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧದ ಬೆಂಗಳೂರಿನ ಹಲಗೆ ವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ ರದ್ದುಪಡಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸುವ ಮೂಲಕ ಮಹತ್ವದ ಆದೇಶ ಮಾಡಿದೆ. ಇದರಿಂದ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ.

2018ರಲ್ಲಿ ತಿದ್ದುಪಡಿಯಾಗಿರುವ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ನಿಬಂಧನೆಯಡಿ ವಿನಾಯಿತಿ ಕೋರಿ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯಲ್ಲಿ ಅರ್ಹತೆ ಇಲ್ಲ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತಾ ಮತ್ತು ರಾಜೇಶ್‌ ಬಿಂದಾಲ್‌ ಅವರ ವಿಭಾಗೀಯ ಪೀಠ ಆದೇಶಿಸಿದೆ.

ಕುಮಾರಸ್ವಾಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ತಿದ್ದುಪಡಿಯಾಗಿರುವ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 19ರ ಅಡಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ವಿಚಾರಣಾಧೀನ ನ್ಯಾಯಾಲಯ ಮುಂದುವರಿಯಲಾಗದು” ಎಂದು ವಾದಿಸಿದ್ದರು.

ಆದರೆ, ಈ ವಾದವನ್ನು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗೊ ತಿರಸ್ಕರಿಸಿದ್ದು, ತಿದ್ದುಪಡಿಗೆ ಒಳಗಾದ ಕಾಯಿದೆಯನ್ನು ತಿದ್ದುಪಡಿಗೂ ಮುಂಚಿತವಾಗಿ ಎಸಗಲಾದ ದುರ್ನಡತೆಗೆ ಪೂರ್ವಾನ್ವಯಿಸಲಾಗದು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅವಧಿಯಲ್ಲಿ ಡಿನೋಟಿಫಿಕೇಷನ್‌ ಮಾಡಿದ್ದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿಯವರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಲು ನಿರಾಕರಿಸಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರಿನ್‌ ರಾವಲ್‌ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅಮನ್‌ ಪನ್ವರ್‌ ಅವರು “ಹಿಂದಿನ ಅಪರಾಧಕ್ಕೆ 2018ರ ತಿದ್ದುಪಡಿ ಕಾಯಿದೆ ಅನ್ವಯಿಸಲಾಗದು. ಹೀಗಾಗಿ, ಅನುಮತಿ ಅಗತ್ಯವಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 1997ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬನಶಂಕರಿಯ ಹಲಗೆ ವಡೇರಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 2 ಎಕರೆ 24 ಗುಂಟೆ ಜಮೀನನ್ನು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಿಡಿಎ ಆಕ್ಷೇಪದ ನಡುವೆಯೂ ಡಿನೋಟಿಫೈ ಮಾಡಿದ್ದರು. ಆನಂತರ ಈ ಆಕ್ಷೇಪಾರ್ಹವಾದ ಭೂಮಿಯನ್ನು 2010ರಲ್ಲಿ ₹4.14 ಕೋಟಿಗೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿತ್ತು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರಹಳ್ಳಿ ಹೋಬಳಿಯ ಹಲಗೆ ವಡೇರಹಳ್ಳಿ ಗ್ರಾಮದ ಸರ್ವೇ ನಂಬರ್‌ 128ರಲ್ಲಿ 1 ಎಕರೆ 10 ಗುಂಟೆ ಮತ್ತು ಸರ್ವೇ ನಂಬರ್‌ 130ರಲ್ಲಿ 1 ಎಕರೆ, 14 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಎಂ ಎಸ್‌ ಮಹದೇವಸ್ವಾಮಿ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಲೋಕಾಯುಕ್ತ ತನಿಖೆಗೆ ನ್ಯಾಯಾಲಯವು ಆದೇಶಿಸಿತ್ತು. ಈ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಕುಮಾರಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು 2015ರಲ್ಲಿ ವಜಾಗೊಂಡಿತ್ತು. ಇದರಲ್ಲಿ ಮಧ್ಯಪ್ರವೇಶಿಸಲು 2016ರಲ್ಲಿ ಸುಪ್ರೀಂ ಕೋರ್ಟ್‌ ಸಹ ನಿರಾಕರಿಸಿ, ತನಿಖೆಗೆ ಅಸ್ತು ಎಂದಿತ್ತು.

2019ರಲ್ಲಿ ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತರು ಮುಕ್ತಾಯ ವರದಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಆರೋಪಗಳು ವಿಚಾರಣೆಗೆ ಅರ್ಹವಾಗಿವೆ ಎಂದು ಕುಮಾರಸ್ವಾಮಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಆರೋಪಗಳು ಗಂಭೀರವಾಗಿದ್ದು, ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.