ಬಾಬರಿ ಮಸೀದಿ ಮರು ನಿರ್ಮಾಣ ಕುರಿತಂತೆ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿದ್ದ ಯುವ ಕಾನೂನು ಪದವೀಧರನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಚೆಗೆ ತಿರಸ್ಕರಿಸಿದೆ [ ಮೊಹಮ್ಮದ್ ಫೈಯಾಜ್ ಮನ್ಸೂರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಕ್ರಿಮಿನಲ್ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.
ಆರೋಪಿ ಅರ್ಜಿದಾರರು ಎತ್ತಿದ ಪ್ರತಿವಾದವನ್ನು ವಿಚಾರಣಾ ನ್ಯಾಯಾಲಯ ತನ್ನದೇ ಅರ್ಹತೆಯ ಮೇಲೆ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದ ಬಳಿಕ ಅರ್ಜಿದಾರರು ಮನವಿ ಹಿಂಪಡೆದರು.
ಪೊಲೀಸರು 2020ರಲ್ಲಿ ದಾಖಲಿಸಿದ ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ಸಂಬಂಧಿಸಿದಂತೆ ಅರ್ಜಿದಾರರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಅರ್ಜಿಯನ್ನು ವಜಾಗೊಳಿಸಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ಬಾಬರಿ ಮಸೀದಿಯನ್ನು ಕೂಡ ಒಂದು ದಿನ ಮರು ನಿರ್ಮಿಸಲಾಗುತ್ತದೆ. ಟರ್ಕಿಯ ಸೋಫಿಯಾ ಮಸೀದಿಯಂತೆ ಎಂದು ಮೊಹಮ್ಮದ್ ಫೈಯಾಜ್ ಮನ್ಸೂರಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿದ್ದರು. ಹೇಳಿಕೆ ಧಾರ್ಮಿಕ ವೈಮನಸ್ಸು ಸೃಷ್ಟಿಸುತ್ತದೆ ಎಂದು ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಮನ್ಸೂರಿ ಮಾಡಿದ್ದ ಮನವಿಯನ್ನು ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು.
1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಹಿಂದುತ್ವವಾದಿ ಗುಂಪುಗಳು ಕೆಡವಿದ್ದವು. 2019ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ಭೂಮಿಯ ಹಕ್ಕು ಶ್ರೀರಾಮ ದೇವರಿಗೆ ಸಂಬಂಧಿಸಿದ್ದು ಎಂದಿತ್ತು. ಪ್ರತ್ಯೇಕ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಜಾಗ ನೀಡಲಾಗಿತ್ತು.
ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನ್ಸೂರಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡುವುದು ಸಂವಿಧಾನದ 19(1)(ಎ) ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದ್ದು ನನ್ನ ಪೋಸ್ಟ್‌ಗೆ ಬಂದಿರುವ ಹೇಳಿಕೆಗಳು ನನ್ನವಲ್ಲ ಎಂದಿದ್ದರು.
ಒಂದು ವರ್ಷಕ್ಕೂ ಹೆಚ್ಚು ಕಾಲ ತಮ್ಮನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಲಾಗಿದ್ದರೂ 2021ರಲ್ಲಿ ಅಲಾಹಾಬಾದ್ ಹೈಕೋರ್ಟ್ ಮುಂಜಾಗ್ರತೆ ಕ್ರಮವಾಗಿ ಬಂಧನ ಆದೇಶವನ್ನು ರದ್ದುಗೊಳಿಸಿತ್ತು ಎಂದರು.
ವಾದ ಆಲಿಸಿದ ಸರ್ವೋಚ್ಚ ನ್ಯಾಯಾಲಯ ಈ ಹಂತದಲ್ಲಿ ಪ್ರಕರಣ ರದ್ದತಿ ಸಾಧ್ಯವಿಲ್ಲ ಎಂದಿತು. ಅಂತಿಮವಾಗಿ, ಬಾಕಿ ಇರುವ ವಿಚಾರಣೆಯಲ್ಲಿ ತನ್ನ ಪ್ರತಿವಾದಕ್ಕೆ ಧಕ್ಕೆ ತರುವ ಯಾವುದೇ ಹೇಳಿಕೆ ತಪ್ಪಿಸಲು ಅರ್ಜಿ ಹಿಂತೆಗೆದುಕೊಳ್ಳುವುದಾಗಿ ವಕೀಲರು ಹೇಳಿದರು. ಅದರಂತೆ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಅನುಮತಿಸಿತು.