Neha Singh Rathore, Supreme Court  Facebook
ಸುದ್ದಿಗಳು

ಮೋದಿ ವಿರುದ್ಧ ಟ್ವೀಟ್: ಗಾಯಕಿ ನೇಹಾ ವಿರುದ್ಧದ ಎಫ್ಐಆರ್ ರದ್ದತಿಗೆ ಸುಪ್ರೀಂ ನಿರಾಕರಣೆ

ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳ ಬಗ್ಗೆ ನೇಹಾ ವಿಚಾರಣಾ ನ್ಯಾಯಾಲಯದ ಮುಂದೆ ಆಕ್ಷೇಪಣೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಬಗ್ಗೆ, ಬಿಹಾರ ಚುನಾವಣೆ ಮತ್ತು ಹಿಂದೂ-ಮುಸ್ಲಿಂ ರಾಜಕೀಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಕುರಿತಂತೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಭೋಜ್‌ಪುರಿ ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ನೇಹಾ ಸಿಂಗ್ ರಾಥೋಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ನೇಹಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಈ ಹಂತದಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳ ಬಗ್ಗೆ ನೇಹಾ ವಿಚಾರಣಾ ನ್ಯಾಯಾಲಯದ ಮುಂದೆ ಆಕ್ಷೇಪಣೆ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ತಿಳಿಸಿತು.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ಮೋದಿ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಗಿಟ್ಟಿಸಲು ಮತ್ತು ಪಾಕಿಸ್ತಾನಕ್ಕೆ ಬೆದರಿಕೆ ಹಾಕಲು ಬಿಹಾರಕ್ಕೆ ಬಂದಿದ್ದಾರೆ ಎಂದು ರಾಥೋಡ್ ಪೋಸ್ಟ್ ಮಾಡಿದ್ದಕ್ಕಾಗಿ ಲಖನೌನ ಹಜರತ್‌ಗಂಜ್ ಪೊಲೀಸರು ಏಪ್ರಿಲ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳಡಿ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಭಯೋತ್ಪಾದಕರನ್ನು ಹುಡುಕಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಬಿಜೆಪಿ ದೇಶವನ್ನು ಯುದ್ಧಕ್ಕೆ ದೂಡಲು ಬಯಸಿದೆ ಎಂದು ಅವರು ಬರೆದಿದ್ದರು. ಬಿಹಾರ ಚುನಾವಣೆಯಲ್ಲಿ ಅವರು ಹಿಂದೂ-ಮುಸ್ಲಿಂ ಅಥವಾ ಭಾರತ-ಪಾಕಿಸ್ತಾನದ ಹೆಸರಿನಲ್ಲಿ ಮತಗಳನ್ನು ಪಡೆಯಬಹುದು, ಮೂರನೇ ಆಯ್ಕೆ ಇಲ್ಲ ಮತ್ತು ಈ ಜನ ಆ ಎರಡು ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ ಎಂದು ನೇಹಾ ಆರೋಪಿಸಿದ್ದರು.

ಈ ಹಿಂದೆ ವಿಚಾರಣೆ ನಡೆಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಎಫ್ಐಆರ್ ಮತ್ತಿತರ ದಾಖಲೆಗಳು ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳ ತನಿಖೆ ಸಮರ್ಥಿಸುವ ಸಂಜ್ಞೇಯ ಅಪರಾಧ ನಡೆದಿರುವುದಾಗಿ ಹೇಳುತ್ತವೆ. ಪಹಲ್ಗಾಮ್ ದಾಳಿ ನಡೆದ ಬೆನ್ನಿಗೇ ಈ ಪೋಸ್ಟ್‌ಗಳನ್ನು ಪ್ರಕಟಿಸಿರುವುದರಿಂದ ಸಾಮಾಜಿಕ ಅಶಾಂತಿ ಅಥವಾ ಹಗೆ ಹುಟ್ಟುವ ಸಾಧ್ಯತೆ ಇತ್ತು ಎಂದು ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ನೇಹಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನೇಹಾ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಟ್ವೀಟ್‌ ಆಧರಿಸಿ ಗಂಭೀರ ಆರೋಪ ಮಾಡಿರುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದರು. ಟ್ವೀಟ್‌ ಮಾಡಿದರೆ ಅದು ದ್ರೋಹ ಹೇಗಾದೀತು ಎಂದು ಅವರು ಪ್ರಶ್ನಿಸಿದರು.

ಆಗ ನ್ಯಾ. ಮಹೇಶ್ವರಿ ಅವರು ಹೈಕೋರ್ಟ್ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದೆಯಷ್ಟೇ, ಅದು ದೋಷಾರೋಪ ನಿಗದಿಗೊಳಿಸಿದ ತೀರ್ಪಲ್ಲ ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಸಿಬಲ್‌ ಅವರು ನೇಹಾರನ್ನು ಬಂಧಿಸುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದರಾದರೂ ಪ್ರಕರಣದ ಅರ್ಹತೆ ಕುರಿತಂತೆ ಸುಪ್ರೀಂ ಕೋರ್ಟ್‌ ಯಾವುದೇ ಅಭಿಪ್ರಾಯ ನೀಡಲು ನಿರಾಕರಿಸಿತು.