RG Kar, Supreme Court 
ಸುದ್ದಿಗಳು

ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ: ಪಶ್ಚಿಮ ಬಂಗಾಳದ ಹೊರಗೆ ವಿಚಾರಣೆ ವರ್ಗಾಯಿಸಲು ಸುಪ್ರೀಂ ನಕಾರ

ವೈದ್ಯಕೀಯ ವೃತ್ತಿಪರರ ವಿರುದ್ಧದ ಹಿಂಸಾಚಾರ ನಿಯಂತ್ರಿಸುವ ಸಂಬಂಧ ಸಲಹೆ ನೀಡುವ ಕುರಿತು ತಾನು ರಚಿಸಿದ್ದ ರಾಷ್ಟ್ರೀಯ ಕಾರ್ಯಪಡೆ ಸಲ್ಲಿಸಿರುವ ವರದಿಯ ಕುರಿತು ತಮ್ಮ ಅಭಿಪ್ರಾಯ ನೀಡುವಂತೆ ನ್ಯಾಯಾಲಯ ಎಲ್ಲಾ ರಾಜ್ಯ ಸರ್ಕಾರಗಳನ್ನು ಕೇಳಿದೆ.

Bar & Bench

ಕೋಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಹೊರಗೆ ವರ್ಗಾಯಿಸುವ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ [ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕೋಲ್ಕತ್ತಾ ಹಾಗೂ ಸಂಬಂಧಿತ ಸಮಸ್ಯೆಗಳು].

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರು ವಿಚಾರಣೆಯನ್ನು ವರ್ಗಾಯಿಸಲು ಮನವಿ ಮಾಡಿದರು. ಆದರೆ, ಕೋರ್ಟ್ ಮನವಿ ತಿರಸ್ಕರಿಸಿತು.

ಮಣಿಪುರ ಹಿಂಸಾಚಾರ ಪ್ರಕರಣದಂತಹ ಪ್ರಕರಣಗಳಲ್ಲಿ ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿತ್ತಾದರೂ ಈ ಪ್ರಕರಣದಲ್ಲಿ ನಾವು ಹಾಗೆ ಮಾಡುವುದಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಆದರೆ "ಪಶ್ಚಿಮ ಬಂಗಾಳದ ಜನರು ಪೊಲೀಸ್ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ" ಎಂದು ಪ್ರಕರಣದ ಸಂಬಂಧ ವಕೀಲರೊಬ್ಬರು ಪಟ್ಟುಹಿಡಿದರು.

ಇದನ್ನು ಒಪ್ಪದ ಸಿಜೆಐ ಚಂದ್ರಚೂಡ್‌ ಅವರು "ಜನರ ಬಗ್ಗೆ ಮಾತನಾಡಬೇಡಿ. ನೀವು ಈಗ ಯಾರ ಪರವಾಗಿ ಪ್ರತಿನಿಧಿಸುತ್ತಿದ್ದೀರಿ? ಅಂತಹ ಸಾಮಾನ್ಯೀಕರಿಸುವ ಹೇಳಿಕೆಗಳನ್ನು ನೀಡಬೇಡಿ. ಅಂತಹ ಸಂಗತಿಯೇ ಇಲ್ಲ," ಎಂದು ಹೇಳಿದರು.

ವಿಚಾರಣೆಯ ವೇಳೆ, ವೈದ್ಯಕೀಯ ವೃತ್ತಿಪರರ ವಿರುದ್ಧದ ಹಿಂಸಾಚಾರ ನಿಯಂತ್ರಿಸುವ ಸಂಬಂಧ ಸಲಹೆ ನೀಡುವ ಕುರಿತು ತಾನು ರಚಿಸಿದ್ದ ರಾಷ್ಟ್ರೀಯ ಕಾರ್ಯಪಡೆ ಸಲ್ಲಿಸಿರುವ ವರದಿಯ ಕುರಿತು ಮೂರು ವಾರಗಳಲ್ಲಿ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ನ್ಯಾಯಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ಅಲ್ಲದೆ, ಸಿಬಿಐ ಸಲ್ಲಿಸಿದ್ದ ತನಿಖೆಯ ಕುರಿತಾದ ಸ್ಥಿತಿಗತಿ ವರದಿಯನ್ನು ನ್ಯಾಯಾಲಯ ಪರಿಶೀಲಿಸಿತು. ನಾಲ್ಕು ವಾರದ ನಂತರ ತನಿಖೆಯಲ್ಲಿನ ಪ್ರಗತಿಯ ಬಗ್ಗೆ ಮತ್ತೊಮ್ಮೆ ವರದಿ ಸಲ್ಲಿಸಲು ಸೂಚಿಸಿತು.

ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೈದ್ಯರು ಮುಷ್ಕರ ನಡೆಸಿದ್ದರು. ಈ ನಡುವೆ ಸಿಬಿಐಗೆ ಪ್ರಕರಣ ವರ್ಗಾವಣೆಗೊಂಡಿತ್ತು.