Supreme Court and ₹2000 note
Supreme Court and ₹2000 note 
ಸುದ್ದಿಗಳು

ಆರ್‌ಬಿಐ ₹ 2,000 ನೋಟು ಹಿಂಪಡೆತ: ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Bar & Bench

ಯಾವುದೇ ಗುರುತಿನ ಚೀಟಿಯ ಅಗತ್ಯವಿಲ್ಲದೆ ₹ 2,000 ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಆರ್‌ಬಿಐ ನಿರ್ಧಾರವನ್ನು ಈ ಹಿಂದೆ ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿತ್ತು. ಈ ತೀರ್ಪು ಪ್ರಶ್ನಿಸಿ ಉಪಾಧ್ಯಾಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆತ್ತಿಕೊಳ್ಳಲು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ರಜಾಕಾಲೀನ ಪೀಠ ಸಮ್ಮತಿಸಲಿಲ್ಲ.

ಅಧಿಸೂಚನೆ ಮನಸೋಇಚ್ಛೆಯಿಂದ ಕೂಡಿದ್ದ ಅಪರಾಧಿಗಳ ಕಪ್ಪು ಹಣ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪ್ರಕರಣ ಪ್ರಸ್ತಾಪಿಸುವ ಸಂದರ್ಭದಲ್ಲಿ ಉಪಾಧ್ಯಾಯ ತಿಳಿಸಿದರು. “3 ದಿನಗಳಲ್ಲಿ 50,000 ಕೋಟಿ ವಿನಿಮಯವಾಗಿದೆ, ಇದು ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ” ಎಂದು ಅವರು ಆಕ್ಷೇಪಿಸಿದರು.

ಆದರೆ ಸುಪ್ರೀಂ ಕೋರ್ಟ್‌ಗೆ ರಜೆ ಇರುವ ಅವಧಿಯಲ್ಲಿ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದಿರುವ ಪೀಠ ಬೇಸಿಗೆ ರಜೆ ಬಳಿಕ ಉಪಾಧ್ಯಾಯ ಅವರು ಪ್ರಕರಣವನ್ನು ಸಿಜೆಐ ಅವರೆದುರು ಪ್ರಸ್ತಾಪಿಸಬಹುದು ಎಂದಿತು.

ಅಲ್ಲಿಯವರೆಗೆ ಸಮಯಾವಕಾಶ ನೀಡಿದರೆ “ಎಲ್ಲಾ ಕಪ್ಪು ಹಣವೂ ಬಿಳಿಯಾಗಿಬಿಡುತ್ತದೆ” ಎಂದು ಉಪಾಧ್ಯಾಯ ಆಕ್ಷೇಪಿಸಿದರು. ಆದರೆ, ಪೀಠವು ಸಮ್ಮತಿಸಲಿಲ್ಲ.