Safety of Judges
Safety of Judges 
ಸುದ್ದಿಗಳು

ನ್ಯಾ.ಉತ್ತಮ್‌ ಶಂಕಾಸ್ಪದ ಸಾವು: ನ್ಯಾಯಾಧೀಶರ ಸುರಕ್ಷತೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ

Bar & Bench

ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಲಯಗಳ ಸುರಕ್ಷತೆ ಹಾಗೂ ನ್ಯಾಯಾಧೀಶರಿಗೆ ರಕ್ಷಣೆಯ ಖಾತ್ರಿ ನೀಡುವ ಸಂಬಂಧ ಸ್ವಯಂ ಪ್ರೇರಿತ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ.

ನ್ಯಾಯಾಲಯಗಳ ಸುರಕ್ಷತೆ ಮತ್ತು ನ್ಯಾಯಾಧೀಶರ ರಕ್ಷಣೆ (ಧನಾಬಾದ್‌ನ ಹೆಚ್ಚುವರಿ ಸತ್ರ ನ್ಯಾಯಾಧೀಶರ ಸಾವು) ಎನ್ನುವ ಶೀರ್ಷಿಕೆಯಡಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ. ವಾಹನವೊಂದರ ಡಿಕ್ಕಿಯಿಂದಾಗಿ ಧನಾಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರು ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣದ ದಾಖಲಿಸಿಕೊಂಡಿದೆ.

ಸಿಜೆಐ ಎನ್‌ ವಿ ರಮಣ ಹಾಗೂ ನ್ಯಾ. ಸೂರ್ಯಕಾಂತ್‌ ಅವರಿದ್ದ ಪೀಠದ ಮುಂದೆ ಶುಕ್ರವಾರ ಪ್ರಕರಣವನ್ನು ಪಟ್ಟಿ ಮಾಡಲಾಗಿತ್ತು. ವಿಚಾರಣೆಯನ್ನು ಕೈಗೊಂಡ ಪೀಠವು ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕರಿಗೆ ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಸೂಚಿಸಿದೆ.

ಆರಂಭದಲ್ಲಿ ಅಪಘಾತದಿಂದ ನ್ಯಾಯಾಧೀಶ ಆನಂದ್‌ ಸಾವನ್ನಪ್ಪಿರಬಹುದು ಎಂದು ನಂಬಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ವಾಹನವೊಂದರಿಂದ ರಸ್ತೆಯ ಅಂಚಿನಲ್ಲಿ ಜಾಗಿಂಗ್‌ ಮಾಡುತ್ತಿದ್ದ ನ್ಯಾಯಾಧೀಶ ಆನಂದ್‌ ಅವರ ಮೇಲೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿರುವುದು ಕಂಡುಬಂದಿತ್ತು.

ಝಾರಿಯಾ ಶಾಸಕ ಸಂಜೀವ್‌ ಸಿಂಗ್‌ ಬೆಂಬಲಿಗ ರಂಜಯ್‌ ಸಿಂಗ್‌ ಕೊಲೆ ಪ್ರಕರಣ ಸೇರಿದಂತೆ ಕೆಲವು ಮಹತ್ವದ ಪ್ರಕರಣಗಳ ವಿಚಾರಣೆಯನ್ನು ನ್ಯಾ. ಆನಂದ್‌ ನಡೆಸುತ್ತಿದ್ದರು. ಅಲ್ಲದೇ, ಈಚೆಗೆ ನ್ಯಾ. ಆನಂದ್‌ ಅವರು ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಅಮನ್‌ ಸಿಂಗ್‌ ಗುಂಪಿನ ಇಬ್ಬರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿದೆ.

ನ್ಯಾ. ಆನಂದ್‌ ಸಾವಿನ ಬೆನ್ನಿಗೇ ಜಾರ್ಖಂಡ್‌ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನ್ಯಾಯಾಧೀಶರ ಸಾವಿನ ತನಿಖೆಯ ಮೇಲೆ ನಿಗಾ ಇರಿಸಿದೆ. ತನ್ನ ಆದೇಶವು ಜಾರ್ಖಂಡ್‌ ಹೈಕೋರ್ಟ್‌ ಆದೇಶದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದುವರೆಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.