ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯ ಆಂತರಿಕ ಸಂವಹನಕ್ಕೆ ಇ-ಮೇಲ್ ಕಡ್ಡಾಯಗೊಳಿಸುವ ನೀತಿ ಜಾರಿಯ ಮೂಲಕ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಐತಿಹಾಸಿಕ ಮಹತ್ವದ ನಿರ್ಣಯಕೈಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಸದಸ್ಯರು ಮುಂದೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಎಲ್ಲ ರೀತಿಯ ಅಧಿಕೃತ ಸಂವಹನ ನಡೆಸಬೇಕು ಎಂಬ ವಿಚಾರವನ್ನು ಮೂಲಗಳು ಬಾರ್ ಅಂಡ್ ಬೆಂಚ್‌ಗೆ ತಿಳಿಸಿವೆ.
ಆಂತರಿಕ ನೆಟ್‌ವರ್ಕ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಎಲ್ಲಾ ಕಡತಗಳನ್ನು ವರ್ಗಾವಣೆ ಮಾಡುವ ಇ-ಆಫೀಸ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಈ ಹಿಂದೆ ಪತ್ರದ ಮೂಲಕ ಸಂವಹನ ನಡೆಸಲಾಗುತ್ತಿತ್ತು. ಸಿಬ್ಬಂದಿಯು ಕಚೇರಿ ನೋಟ್ಸ್ ಸಿದ್ಧಪಡಿಸಿ, ಕಡತಗಳನ್ನು ಭೌತಿಕವಾಗಿ ಕೊಂಡೊಯ್ಯುತಿದ್ದರು.
“ಇಡೀ ಕಚೇರಿಯ ಪ್ರಕ್ರಿಯೆಯು ಇನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕ ನಡೆಯಲಿದೆ ಇಡೀ ಪ್ರಕ್ರಿಯೆಯನ್ನು ಹೊಸ ವಿಧಾನಕ್ಕೆ ಅಳವಡಿಸಲು ಸಾಕಷ್ಟು ಕಾಲಾವಕಾಶಬೇಕಾಗುತ್ತದೆ. ಇದರದ್ದೇ ಆದ ಸವಾಲುಗಳಿವೆ” ಎಂದು ಮೂಲವೊಂದು ತಿಳಿಸಿದೆ.
ಪ್ರತಿ ರಿಜಿಸ್ಟ್ರಾರ್ ಕಚೇರಿಗೆ ಪ್ರತಿದಿನ 300-400 ಇ-ಮೇಲ್‌ಗಳು ಬರುತ್ತಿದ್ದು, ಇವುಗಳನ್ನು ಮುದ್ರಿಸಿ ಆನಂತರ ಅವುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿಡಲಾಗುತ್ತದೆ. ಈಗ ಕಾಗದರಹಿತವಾದ ವಿಧಾನ ಅಳವಡಿಕೆ ಮಾಡಿಕೊಳ್ಳುವುದರಿಂದ ಪ್ರತಿದಿನ ಒಂದು ರಿಜಿಸ್ಟ್ರಾರ್ ಕಚೇರಿಯಲ್ಲಿ 300-400 ಕಾಗದದ ಹಾಳೆಗಳು ಉಳಿತಾಯವಾಗಲಿವೆ.
ಹೊಸ ಯತ್ನದಲ್ಲಿ ರಿಜಿಸ್ಟ್ರಿ ಹಿಡಿತ ಸಾಧಿಸಿದ ಬಳಿಕ ಎರಡನೇ ಹಂತದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಕಚೇರಿಗಳು ಕಾಗದರಹಿತವಾಗಲಿವೆ ಎಂಬ ವಿಚಾರ ಬಾರ್ ಅಂಡ್ ಬೆಂಚ್‌ಗೆ ಮೂಲಗಳಿಂದ ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ಈಚೆಗೆ ವಕೀಲರಿಗಾಗಿ ಆನ್‌ಲೈನ್ ಹಾಜರಾತಿ ದಾಖಲಿಸಲು ಅವಕಾಶ ಮಾಡಿದ್ದು, ಇದರಿಂದ ಭೌತಿಕವಾಗಿ ಹಾಜರಾತಿ ಚೀಟಿಗಳನ್ನು ಸಲ್ಲಿಸುವ ಪ್ರಕ್ರಿಯೆಗೆ ಇತಿಶ್ರೀ ಹಾಡಲಾಗಿದೆ. ಇದುವರೆಗೆ ಸುಮಾರು 72,000 ಆನ್‌ಲೈನ್ ಹಾಜರಾತಿ ದಾಖಲಿಸಲಾಗಿದ್ದು ಇದರಿಂದಾಗಿ 72,000 ಕಾಗದದ ಹಾಳೆಗಳ ಉಳಿತಾಯವಾಗಿದೆ. “ದಿನಂಪ್ರತಿ ಈ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆನ್‌ಲೈನ್ ಮೂಲಕ ಹೆಚ್ಚು ಹಾಜರಾತಿ ದಾಖಲಿಕೆಯಾಗುತ್ತಿದೆ” ಎಂದು ಮೂಲ ತಿಳಿಸಿದೆ.