Supreme Court of India 
ಸುದ್ದಿಗಳು

ಕೋವಿಡ್ ಅವಧಿಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅರ್ಧದಷ್ಟು ಶುಲ್ಕ ಮನ್ನಾ: ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ

ಹೆಚ್ಚುವರಿ ಮೊತ್ತ ಮರುಪಾವತಿಸುವಂತೆ ಸೂಚಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿವಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ವಜಾಗೊಳಿಸಿತು.

Bar & Bench

ಪಟಿಯಾಲದಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು (ಆರ್‌ಜಿಎನ್‌ಯುಎಲ್‌) ಕೋವಿಡ್ ಅವಧಿಯಲ್ಲಿನ  ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೇವಲ ಅರ್ಧದಷ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ . [ರಾಜೀವ್ ಗಾಂಧಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಲಾ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

ಹೆಚ್ಚುವರಿ ಮೊತ್ತ ಮರುಪಾವತಿಸುವಂತೆ ಸೂಚಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ವಿವಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ವಜಾಗೊಳಿಸಿತು. ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಅದು ಹೇಳಿತು.

ಸಂಸ್ಥೆ ಹಣಕಾಸು ಕೊರತೆ ಎದುರಿಸುತ್ತಿದ್ದು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ದೊರೆಯುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಆರ್‌ಜಿಎನ್‌ಯುಎಲ್‌ ಪರ ವಕೀಲರು ತಿಳಿಸಿದಾಗ ನ್ಯಾ. ಗವಾಯಿ ಅವರು ಅದಕ್ಕಾಗಿ ಸೂಕ್ತ ದಾವೆ ಹೂಡುವಂತೆ ಸೂಚಿಸಿದರು.

ಮೆಸ್, ಕ್ಯಾಂಟೀನ್, ಅಂಗಡಿ ಇತ್ಯಾದಿಗಳನ್ನು ನಿರ್ವಹಿಸುವ ಗುತ್ತಿಗೆದಾರರರಿಂದ ವಿವಿಯು ಕೋವಿಡ್‌ ಅವಧಿಯಲ್ಲಿ ಕೇವಲ ಶೇ 25ರಷ್ಟು ಶುಲ್ಕ ವಸೂಲಿ ಮಾಡಿದೆ. ಹೀಗಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿಧಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪಿನಲ್ಲಿ ವಿವರಿಸಿತ್ತು.  ಆ ಮೂಲಕ ಆರ್‌ಜಿಎನ್‌ಯುಎಲ್‌ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ವಿಭಾಗೀಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿವಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.