Justice MR Shah and Justice CT Ravikumar
Justice MR Shah and Justice CT Ravikumar 
ಸುದ್ದಿಗಳು

ಕೊಲಿಜಿಯಂನ ಅಂತಿಮ ತೀರ್ಮಾನವನ್ನು ಮಾತ್ರ ಸಾರ್ವಜನಿಕಗೊಳಿಸಬೇಕೆ ವಿನಾ ಚರ್ಚೆಯನ್ನಲ್ಲ: ಸುಪ್ರೀಂ ಕೋರ್ಟ್‌

Bar & Bench

ಸುಪ್ರೀಂ ಕೋರ್ಟ್‌ ಕೊಲಿಜಿಯಂ 2018ರ ಡಿಸೆಂಬರ್‌ 12ರಂದು ನಡೆಸಿದ ಸಭೆಯ ವಿವರಗಳನ್ನು ಸಾರ್ವಜನಿಕಗೊಳಿಸಿಲ್ಲದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ [ಅಂಜಲಿ ಭಾರದ್ವಾಜ್‌ ವರ್ಸಸ್‌ ಸಿಪಿಐಒ, ಸುಪ್ರೀಂ ಕೋರ್ಟ್‌].

ಮಾಹಿತಿ ಇಲ್ಲ ಎಂದು ಅದನ್ನು ನಿರಾಕರಿಸಲಾಗದು ಎಂದು ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಸಿ ಟಿ ರವಿಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.  ಕೊಲಿಜಿಯಂ ಸಭೆಯಲ್ಲಿ ನಡೆದ ಚರ್ಚೆಯನ್ನು ಅಂತಿಮ ತೀರ್ಮಾನ ಎನ್ನಲಾಗದು ಪೀಠವು ಹೇಳಿದೆ.

“ಸಭೆಯಲ್ಲಿ ನಡೆದ ಚರ್ಚೆಯನ್ನು ಅಂತಿಮ ತೀರ್ಮಾನ ಎನ್ನಲಾಗದು. ಅಂತಿಮ ನಿರ್ಣಯವನ್ನು ಮಾತ್ರ ತೀರ್ಮಾನ ಎಂದು ಪರಿಗಣಿಸಲಾಗುತ್ತದೆ. ಕೊಲಿಜಿಯಂನಲ್ಲಿ ಹಲವು ಸದಸ್ಯರಿದ್ದು ಅದರ ತೀರ್ಮಾನ ನಿರ್ಣಯವಾಗುತ್ತದೆ. ಸಮಾಲೋಚನೆಯು (ಕೊಲಿಜಿಯಂನ ಡಿ.12ರ ಸಭೆ) ಅಂತಿಮವಾಗದ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು” ಎಂದು ಪೀಠ ಹೇಳಿದೆ.

ಕೊಲಿಜಿಯಂನ ಅಂತಿಮ ಚರ್ಚೆಯನ್ನು ಮಾತ್ರವೇ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕೆ ವಿನಾ, ಕೊಲಿಜಿಯಂನೊಳಗೆ ನಡೆಯುವ ಚರ್ಚೆಯನ್ನಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. “ಸಭೆಯಲ್ಲಿ ಚರ್ಚೆಯಾಗಿದ್ದೆಲ್ಲವೂ ಸಾರ್ವಜನಿಕ ವೇದಿಕೆಗೆ ಬರಬೇಕಿಲ್ಲ. ಅಂತಿಮ ತೀರ್ಮಾನವನ್ನು ಮಾತ್ರ ಅಪ್‌ಲೋಡ್‌ ಮಾಡಬೇಕು” ಎಂದು ಪೀಠ ಹೇಳಿದೆ.

ಕೊಲಿಜಿಯಂ ಸಭೆಯಲ್ಲಿ ಅಧಿಕೃತ ದಾಖಲೆಗಳು ಸೇರಿದಂತೆ ಹಲವು ಪತ್ರಗಳನ್ನು ಅಜೆಂಡಾದ ಉಲ್ಲೇಖವಾಗಿ ಬಳಸಲಾಗುತ್ತದೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮತ್ತು ನೇಮಕಾತಿಗಳ ಕುರಿತಾದ ಮಾಹಿತಿಯನ್ನು ಸಂರಕ್ಷಿತ ವರ್ಗದ ದಾಖಲೆಗಳು ಎಂದು ಪರಿಗಣಿಸುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಗೌಪ್ಯತೆಯ ಮುಸುಕಿನ ಅಡಿಯಲ್ಲಿ ಮುಚ್ಚಿಡಲಾಗದು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. ಅರ್ಜಿದಾರರನ್ನು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಪ್ರತಿನಿಧಿಸಿದ್ದರು.