ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನೀಡಿದ್ದ ದೂರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಗನ್ ಮೋಹನ್ ರೆಡ್ಡಿ ಮಾಡಿದ ಆರೋಪಗಳನ್ನು ಪರಿಶೀಲಿಸಲು ಆಂತರಿಕ ವಿಧಾನವನ್ನು ಅನುಸರಿಸಲಾಯಿತು ಮತ್ತು ಸೂಕ್ತ ಪರಿಗಣನೆಯ ನಂತರ ದೂರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
“ಆಂಧ್ರಪ್ರದೇಶದ ಮುಖ್ಯಮಂತ್ರಿ ಅವರು ಕಳೆದ ವರ್ಷದ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ದೂರನ್ನು ಪರಿಗಣಿಸಿ, ಆಂತರಿಕ ವಿಧಾನದ ಮೂಲಕ ಪರಿಶೀಲಿಸಿ ಅದನ್ನು ವಜಾಗೊಳಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಂತರಿಕ ವಿಧಾನದ ಮೂಲಕ ಪರಿಶೀಲನೆಗೆ ಒಳಪಡಿಸಲಾದ ಎಲ್ಲಾ ವಿಚಾರಗಳೂ ಸಂಪೂರ್ಣವಾಗಿ ಗೌಪ್ಯವಾಗಿದ್ದು, ಅವುಗಳನ್ನು ಸಾರ್ವಜನಿಕಗೊಳಿಸಲಾಗದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ರಮಣ ವಿರುದ್ಧ ಕೆಲವು ಆರೋಪಗಳನ್ನು ಮಾಡಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಕ್ಟೋಬರ್ 6ರಂದು ಪತ್ರ ಬರೆದಿದ್ದರು. ಬಳಿಕ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ನಲ್ಲಿ ತಮ್ಮ ದೂರನ್ನು ಸಲ್ಲಿಸಿದ್ದರು.
ಸಿಜೆಐ ಎಸ್ ಎ ಬೊಬ್ಡೆ ಏಪ್ರಿಲ್ 23ರಂದು ನಿವೃತ್ತಿ ಹೊಂದುತ್ತಿದ್ದು, ಮಂಗಳವಾರ ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ರಮಣ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ಇದೇ ವೇಳೆ ಹಾಲಿ ನ್ಯಾಯಮೂರ್ತಿಗಳ ವಿರುದ್ಧದ ಪತ್ರ ಮುಖೇನ ಸಲ್ಲಿಸಲಾಗಿದ್ದ ದೂರನ್ನೂ ವಜಾಗೊಳಿಸಿದ್ದಾರೆ.