ಮನೀಶ್ ಸಿಸೋಡಿಯಾ, ಸುಪ್ರೀಂ ಕೋರ್ಟ್ ಮನೀಶ್ ಸಿಸೋಡಿಯಾ ಅವರ ಫೇಸ್‌ಬುಕ್‌ ಖಾತೆ
ಸುದ್ದಿಗಳು

ದೆಹಲಿ ಅಬಕಾರಿ ನೀತಿ ಹಗರಣ: ಜಾಮೀನು ಕೋರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಪ್ರಕರಣದಲ್ಲಿ ಮುಕ್ತ ನ್ಯಾಯಾಲಯದ ವಿಚಾರಣೆ ಕೋರಿ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Bar & Bench

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಹಾಗೂ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಚೆಗೆ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್‌ ಗವಾಯಿ ಹಾಗೂ ಎಸ್‌ ವಿ ಎನ್‌ ಭಟ್ಟಿ ಅವರನ್ನೊಳಗೊಂಡ ಪೀಠ ಮುಕ್ತ ನ್ಯಾಯಾಲಯದ ವಿಚಾರಣೆ ನಿರಾಕರಿಸಿತು. ಜೊತೆಗೆ ಪರಿಶೀಲನೆಗೆ ಯಾವುದೇ ಆಧಾರ ಒದಗಿಸಿಲ್ಲ ಎಂದಿತು.

"ನಾವು ಕ್ಯುರೇಟಿವ್ ಅರ್ಜಿಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ರೂಪಾ ಅಶೋಕ್ ಹುರ‍್ರಾ ಮತ್ತು ಅಶೋಕ್ ಹುರ‍್ರಾ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಸೂಚಿಸಲಾದ ಅಂಶಗಳಿಗೆ ತಕ್ಕಂತೆ ವಾದಾಂಶಗಳಿಲ್ಲ. ಕ್ಯುರೇಟಿವ್ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಲಭ್ಯ ಇರುವ ಕೊನೆಯ ನ್ಯಾಯಾಂಗ ಪರಿಹಾರ ಎಂದರೆ ಕ್ಯುರೇಟಿವ್ ಅರ್ಜಿ. ರೂಪಾ ಅಶೋಕ್ ಹುರ‍್ರಾ ಮತ್ತು ಅಶೋಕ್ ಹುರ‍್ರಾ ನಡುವಣ ಪ್ರಕರಣದಲ್ಲಿ ಇತ್ಯರ್ಥವಾಗಿರುವಂತೆ ಇಂತಹ ಪ್ರಕರಣಗಳ ವಿಚಾರಣೆ ನ್ಯಾಯಮೂರ್ತಿಗಳೆದುರು ನಡೆಯುತ್ತದೆಯೇ ವಿನಾ ನ್ಯಾಯಾಲಯದಲ್ಲಿ ಅಲ್ಲ.

ಸಿಸೋಡಿಯಾ ಅವರಿಗೆ ಕಳೆದ ಅಕ್ಟೋಬರ್ 30 ರಂದು ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿತ್ತು.

"ವಿಶ್ಲೇಷಣೆಯಲ್ಲಿ ಅನುಮಾನಾಸ್ಪದವಾದ ಕೆಲವು ಅಂಶಗಳಿವೆ. ವರ್ಗಾವಣೆಗೆ ಸಂಬಂಧಿಸಿದಂತೆ ₹ 338 ಕೋಟಿ ಮೊತ್ತದಷ್ಟು ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಸಾಬೀತಾಗಿದೆ. ನಾವು ಜಾಮೀನನ್ನು ತಿರಸ್ಕರಿಸಿದ್ದೇವೆ" ಎಂದು ಸುಪ್ರೀಂ ಕೋರ್ಟ್ ಆಗ ಹೇಳಿತ್ತು. ಇದನ್ನು ಪ್ರಶ್ನಿಸಿ ಸಿಸೋಡಿಯಾ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅದು  ಡಿಸೆಂಬರ್ 14ರಂದು ವಜಾಗೊಳಿಸಿತ್ತು. ನಂತರ ಅವರು ಕ್ಯುರೇಟಿವ್‌ ಅರ್ಜಿಯ ಮೊರೆ ಹೋಗಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರು ಫೆಬ್ರವರಿ 26, 2023ರಿಂದ ಜೈಲಿನಲ್ಲಿದ್ದು ಅವರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿವೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Manish Sisodia Curative Rejected Order.pdf
Preview