Sajjan Kumar
Sajjan Kumar 
ಸುದ್ದಿಗಳು

ಹೇಯ ಅಪರಾಧದ ಆರೋಪಿಯನ್ನು ವಿಐಪಿಯಾಗಿ ಕಾಣಲು ಬಯಸುವಿರಾ? ಸುಪ್ರೀಂನಿಂದ ಸಜ್ಜನ್‌ಕುಮಾರ್‌ ವೈದ್ಯಕೀಯ ಜಾಮೀನು ಅರ್ಜಿ ವಜಾ

Bar & Bench

ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿದ್ದ 1984ರ ಸಿಖ್‌ ಗಲಭೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾಗಿರುವ ಸಜ್ಜನ್‌ ಕುಮಾರ್‌ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಅದಲ್ಲದೆ, ತಮ್ಮ ಸ್ವಂತ ಖರ್ಚಿನಲ್ಲಿ‌ ಉತ್ತಮ ಚಿಕಿತ್ಸೆ ಪಡೆಯಲು ಮೇದಂತಾ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರಿದ್ದ ಸಜ್ಜನ್‌ ಕುಮಾರ್‌ ಮನವಿಯನ್ನೂ ಸಹ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ನ್ಯಾ. ಎಂ ಎಂ ಸುಂದರೇಶ್‌ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿತು.

“ಸಜ್ಜನ್‌ ಕುಮಾರ್‌ ಹೇಯ ಕೃತ್ಯದಲ್ಲಿ ಆರೋಪಿಯಾಗಿರುವಂತಹವರು. ಅವರನ್ನು ಅತ್ಯಂತ ಗಣ್ಯ ರೋಗಿಯ ರೀತಿಯಲ್ಲಿ ನೋಡಲು ಬಯಸುತ್ತೀರಾ” ಎಂದು ಕುಮಾರ್‌ ಪರ ವಕೀಲ ರಂಜಿತ್‌ ಕುಮಾರ್‌ ಅವರನ್ನು ನ್ಯಾ. ಕೌಲ್‌ ಪ್ರಶ್ನಿಸಿದರು.

ಸಜ್ಜನ್‌ ಕುಮಾರ್‌ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದು, ಅವರು ತಮ್ಮ ದೇಹದ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ ಎಂದು ಕುಮಾರ್‌ ಪೀಠಕ್ಕೆ ವಿವರಿಸಿದರು. ಇದಕ್ಕಾಗಿ ವೈದ್ಯರು ನೀಡಿರುವ ವರದಿಯನ್ನು ರಂಜಿತ್‌ ಕುಮಾರ್‌ ಆಧರಿಸಿದ್ದರು.

“ಸಜ್ಜನ್‌ ಕುಮಾರ್‌ ಉದರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇಹದ ತೂಕವೂ ಗಣನೀಯವಾಗಿ ಇಳಿಕೆಯಾಗಿದೆ. ಅವರದೇ ಖರ್ಚಿನಲ್ಲಿ ಅವರನ್ನು ಮೇದಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿಸಬೇಕು” ಎಂದು ಕುಮಾರ್‌ ಮನವಿ ಮಾಡಿದರು.

ಆದರೆ, ವೈದ್ಯಕೀಯ ಮಂಡಳಿ ಸಲ್ಲಿಸಿರುವ ವರದಿಯನ್ನು ಆಧರಿಸುವುದಾಗಿ ಹೇಳಿದ ನ್ಯಾಯಾಲಯವು ಸದರಿ ವರದಿಯಲ್ಲಿ ಸಜ್ಜನ್‌ ಕುಮಾರ್‌ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಲಾಗಿದೆ ಎಂದಿತು. ಹೀಗಾಗಿ, ಯಾವುದೇ ತೆರನಾದ ಪರಿಹಾರಾತ್ಮಕ ಆದೇಶ ಹೊರಡಿಸಲು ಪೀಠವು ನಿರಾಕರಿಸಿತು.

“ನಾವು ಯಾವುದೇ ಆದೇಶ ಹೊರಡಿಸುತ್ತಿಲ್ಲ. ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ವೈದ್ಯಕೀಯ ಅಧಿಕಾರಿಗಳು ಹೇಳಿದರೆ ಅವರು ಹಾಗೆ ಮಾಡಬಹುದು” ಎಂದು ಹೇಳಿದ ಪೀಠವು ಮನವಿಯನ್ನು ತಿರಸ್ಕರಿಸಿತು. ಮುಂದಿನ ದಿನಾಂಕದಲ್ಲಿ ಪ್ರಕರಣದ ಕಾನೂನಾತ್ಮಕ ಅರ್ಹತೆಯ ಅಂಶಗಳ ಆಧಾರದಲ್ಲಿ ಕುಮಾರ್‌ ಅವರ ಜಾಮೀನು ಮನವಿಯನ್ನು ಪೀಠವು ಆಲಿಸಲಿದೆ.