Supreme Court 
ಸುದ್ದಿಗಳು

ಹತ್ತನೇ ಪರಿಚ್ಛೇದದಡಿ ಪಕ್ಷಾಂತರ ತಡೆ ಕಾಯಿದೆ ಜಾರಿ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಯಾವ ಪಕ್ಷದ ಟಿಕೆಟ್ ಪಡೆದು ಜನಪ್ರತಿನಿಧಿಯಾಗಿ ಆಯ್ಕೆಯಾದರೋ ಆ ಮೂಲ ಪಕ್ಷದಿಂದ ಪಕ್ಷಾಂತರಗೊಂಡಿರುವ ಸಂಸದ ಅಥವಾ ಶಾಸಕರ ಅನರ್ಹತೆಗೆ ಹತ್ತನೇ ಪರಿಚ್ಛೇದ ಅವಕಾಶ ನೀಡುತ್ತದೆ.

Bar & Bench

ಸಂವಿಧಾನದ ಹತ್ತನೇ ಪರಿಚ್ಛೇದದ ಅಡಿಯಲ್ಲಿ ಪಕ್ಷಾಂತರ ತಡೆ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಕಿಹೊಟೊ ಹೊಲೊಹಾನ್ ಮತ್ತು ಜಚಿಲ್ಹು ಇನ್ನಿತರರ ನಡುವಣ ಪ್ರಕರಣದ ತೀರ್ಪಿನಲ್ಲಿ ಹತ್ತನೇ ಪರಿಚ್ಛೇದವನ್ನು ಈಗಾಗಲೇ ಸಾಂವಿಧಾನಿಕ ಪೀಠ ಎತ್ತಿಹಿಡಿದಿದ್ದು ತ್ರಿಸದಸ್ಯ ಪೀಠ ಅದನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

ಚುನಾವಣೆಯ ನಂತರ ಶಾಸಕರು ತಮ್ಮ ರಾಜಕೀಯ ಪಕ್ಷವನ್ನು ಬದಲಾಯಿಸುವ ದುಷ್ಪರಿಣಾಮ  ತಪ್ಪಿಸಲು ಪಕ್ಷಾಂತರ ತಡೆ ಕಾಯಿದೆ ಜಾರಿಗೆ ತರಲಾಗಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಸಂಸತ್ತಿನ ಸದಸ್ಯರು ಅಥವಾ ರಾಜ್ಯ ವಿಧಾನಸಭೆಯ ಸದಸ್ಯರು ತಮ್ಮ ಮೂಲ ಪಕ್ಷದಿಂದ ಪಕ್ಷಾಂತರಗೊಂಡು ಶಾಸಕರಾಗಿ ಆಯ್ಕೆಯಾಗಿರುವುದು ಕಂಡುಬಂದರೆ ಅಂತಹ ಶಾಸಕರನ್ನು ಅನರ್ಹಗೊಳಿಸಲು 52ನೇ ಸಾಂವಿಧಾನಿಕ ತಿದ್ದುಪಡಿಯಿಂದ ಅಸ್ತಿತ್ವಕ್ಕೆ ಬಂದಿರುವ ಹತ್ತನೇ ಪರಿಚ್ಛೇದ ಅವಕಾಶ ಒದಗಿಸುತ್ತದೆ.

ಪಕ್ಷದ ಪೂರ್ವಾನುಮತಿ ಪಡೆಯದೆ ತಾವು ಸೇರಿರುವ ರಾಜಕೀಯ ಪಕ್ಷ ಅಥವಾ ಅದರ ಪರವಾಗಿ ಅಧಿಕಾರ ಪಡೆದ ಯಾವುದೇ ವ್ಯಕ್ತಿ ಅಥವಾ ಪಕ್ಷ ಹೊರಡಿಸಿದ ನಿರ್ದೇಶನಕ್ಕೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವಿದ್ದರೆ  ಆಗಲೂ ಅವರು ಅನರ್ಹರಾಗುತ್ತಾರೆ ಎಂದು ಪರಿಚ್ಛೇದ ಹೇಳುತ್ತದೆ.

ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ 1992ರಲ್ಲಿ,  ಬಹುಮತದ ತೀರ್ಪಿನ ಮೂಲಕ ಪರಿಚ್ಛೇದದ ಸಿಂಧುತ್ವ ಎತ್ತಿಹಿಡಿದಿತ್ತು. ಪಕ್ಷಾಂತರ ನಿಷೇಧಿಸುವ ಸೆಕ್ಷನ್‌ಗಳು ಸ್ವಾಗತಾರ್ಹವಾಗಿದ್ದು ತತ್ವರಹಿತ ಮತ್ತು ಅನೈತಿಕ ರಾಜಕೀಯ ಪಕ್ಷಾಂತರಗಳನ್ನು ತಡೆಯುವ ಮೂಲಕ ಭಾರತೀಯ ಸಂಸದೀಯ ಪ್ರಜಾಪ್ರಭುತ್ವ ಬಲಪಡಿಸುವ ಉದ್ದೇಶ ಈ ಸೆಕ್ಷನ್‌ಗಳಿಗೆ ಇದೆ ಎಂದಿತ್ತು.