KSRTC 
ಸುದ್ದಿಗಳು

ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ಅರ್ಜಿದಾರರು ನ್ಯಾಯಾಲಯಕ್ಕೆ ಬರುವ ಬದಲು ಸರ್ಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದ ಪೀಠ.

Bar & Bench

ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುವುದರಿಂದ ಉಂಟಾಗುವ ಅಪಾಯ ಎತ್ತಿ ತೋರಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ [ಸಂಗಮ್ ಲಾಲ್ ಪಾಂಡೆ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಾರಿಗೆ ಇಲಾಖೆಗಳು ಮತ್ತು ಖಾಸಗಿ ಮಾಲೀಕರು ಬಸ್‌ಗಳಲ್ಲಿ ಅನಿಯಂತ್ರಿತವಾಗಿ ಜನರನ್ನು ತುಂಬಿಸುವುದರಿಂದ ಅಪಘಾತ ಉಂಟಾಗಿ ಪ್ರತಿ ವರ್ಷ ಲಕ್ಷಾಂತರ ಜೀವಗಳು ಬಲಿಯಾಗುತ್ತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ನೀತಿ ನಿರೂಪಣೆಗೆ ಸಂಬಂಧಿಸಿದ ಪ್ರತಿಯೊಂದು ವಿಚಾರದಲ್ಲೂ ಸುಪ್ರೀಂ ಕೋರ್ಟ್‌ಗೆ ಎಡತಾಕುವುದನ್ನು ಬಿಡಬೇಕು ಎಂದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಅರ್ಜಿದಾರರು ನ್ಯಾಯಾಲಯಕ್ಕೆ ಬರುವ ಬದಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಹೇಳಿತು.

"ಸರ್ಕಾರಕ್ಕೆ ಪತ್ರ ಬರೆಯಿರಿ. ಸಂವಿಧಾನದ ಉಳಿದ ಅಂಗಗಳು ಕಾರ್ಯನಿರ್ವಹಿಸುತ್ತಿವೆ. ನೀವು ಎಲ್ಲದಕ್ಕೂ ನ್ಯಾಯಾಲಯಕ್ಕೆ ಬರುವಂತಿಲ್ಲ" ಎಂದು ಸಿಜೆಐ ಗವಾಯಿ ಹೇಳಿದರು.

"ಪ್ರಕರಣ ಸರ್ಕಾರದ ನೀತಿ ನಿರೂಪಣೆ ವ್ಯಾಪ್ತಿಯಲ್ಲಿದೆ. ನಾವು ಮಧ್ಯಪ್ರವೇಶಿಸಲು ಒಲವು ತೋರುವುದಿಲ್ಲ" ಎಂದ ಅದು ಅರ್ಜಿ ವಜಾಗೊಳಿಸಿತು.