WhatsApp, Supreme Court 
ಸುದ್ದಿಗಳು

ವಾಟ್ಸಾಪ್ ನಿಷೇಧ ಕೋರಿಕೆ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸ ಐಟಿ ನಿಯಮಗಳನ್ನು ವಾಟ್ಸಾಪ್ ಪಾಲಿಸದಿದ್ದರೆ ಅದರ ಕಾರ್ಯಾಚರಣೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿತ್ತು.

Bar & Bench

ನೂತನ ಮಾಹಿತಿ ತಂತ್ರಜ್ಞಾನ ನಿಯಮಾವಳಿ (ಐಟಿ ನಿಯಮಾವಳಿ)  ಪಾಲಿಸದ ವಾಟ್ಸಾಪ್ ಕಾರ್ಯಾಚರಣೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. [ಓಮನ್ ಕುಟ್ಟನ್ ಕೆ ಜಿ ಮತ್ತು ವಾಟ್ಸಾಪ್ ಅಪ್ಲಿಕೇಷನ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ]

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಇಂದು ಈ ಆದೇಶ ಹೊರಡಿಸಿದೆ.

ಈ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಾದ ಓಮನ್ ಕುಟ್ಟನ್ ಕೆ ಜಿ ಅವರು ಸರ್ಕಾರದ ಅಧಿಕಾರಿಗಳು ಹೊರಡಿಸಿದ ಆದೇಶ ಪಾಲಿಸದಿದ್ದಲ್ಲಿ ವಾಟ್ಸಾಪ್ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ- 2021ನ್ನು (ಐಟಿ ನಿಯಮಾವಳಿ) ಪ್ರಶ್ನಿಸಿ ವಾಟ್ಸಾಪ್ ದೆಹಲಿ ನ್ಯಾಯಾಲಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ಓಮನ್‌ ಕುಟ್ಟನ್ ಅರ್ಜಿ ಸಲ್ಲಿಸಿದರು .

ಜೂನ್ 2021ರಲ್ಲಿ ಕೇರಳ ಹೈಕೋರ್ಟ್ ಆ PIL ಅನ್ನು 'ಅಕಾಲಿಕ' ಎಂದು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಓಮನ್ ಕುಟ್ಟನ್ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.

ವಾಟ್ಸಾಪ್‌ನ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವಿಧಾನ ಸಂದೇಶಗಳ ಮೂಲ ಪತ್ತೆಹಚ್ಚುವುದನ್ನು ತಡೆಯುವ ಹಿನ್ನೆಲೆಯಲ್ಲಿ 2021ರ ಐಟಿ ನಿಯಮಗಳಿಗೆ ತಾನು ಬದ್ಧನಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್ ಹೇಳಿಕೊಂಡಿದೆ ಎಂಬುದಾಗಿ ಹೈಕೋರ್ಟ್‌ನ ಮುಂದೆ ಅರ್ಜಿದಾರರು ವಾದಿಸಿದ್ದರು.

ಆದರೂ ವಾಟ್ಸಾಪ್‌ನ ಗೌಪ್ಯತಾ ನೀತಿ ಕೆಲವೊಮ್ಮೆ ಬಳಕೆದಾರರು ಕಳಿಸುವ ಸಂದೇಶ ಸಂಗ್ರಹಿಸಿ ಬೇರೆಯವರು ಅವರ ಬಗ್ಗೆ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅಲ್ಲದೆ ವಾಟ್ಸಾಪ್‌ನಲ್ಲಿ ಭದ್ರತೆಯ ಕೊರತೆಯಿದೆ, ಸುಳ್ಳು ಸುದ್ದಿ ಹಾಗೂ ಚಿತ್ರಗಳನ್ನು ಪ್ರಚುರ ಮಾಡುವ ರಾಷ್ಟ್ರ ವಿರೋಧಿ ಮತ್ತು ಸಮಾಜಘಾತುಕ ಶಕ್ತಿಗಳಿಂದ ಕೂಡಿದೆ. ನ್ಯಾಯಾಲಯದ ಸಮನ್ಸ್‌ ಮತ್ತು ಲೀಗಲ್‌ ನೋಟಿಸ್‌ಗಳನ್ನು ಕಳಿಸಲು ವಾಟ್ಸಾಪ್‌ ರೀತಿಯ ಅಪ್ಲಿಕೇಷನ್‌ಗಳನ್ನು ಅವಲಂಬಿಸುವುದು ಅಪಾಯಕಾರಿ ಎಂದು ಅದು ದೂರಿತ್ತು.