ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಕೆ ಜಿ ವಂಜಾರ ವರ್ಸಸ್ ಭಾರತ ಸರ್ಕಾರ].
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಅರ್ ಶಾ ಮತ್ತು ಕೃಷ್ಣ ಮುರಾರಿ ಅವರ ನೇತೃತ್ವದ ಪೀಠವು ಈ ವಿಚಾರವನ್ನು ಪರಿಗಣಿಸಲು ಸಂಸತ್ತು ಸೂಕ್ತ ವೇದಿಕೆಯೇ ಹೊರತು ನ್ಯಾಯಾಲಯವಲ್ಲ ಎಂದು ಹೇಳಿತು.
"ನಾವೇಕೆ ನೋಟಿಸ್ ನೀಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ನಾವು ನಿಮ್ಮ ಕೆಲ ಅಭಿಪ್ರಾಯಗಳೊಂದಿಗೆ ಸಹಮತ ಹೊಂದಿರಬಹುದು ಆದರೆ ಇದನ್ನು ಚರ್ಚಿಸಲು ಸಂಸತ್ತು ಸೂಕ್ತವಾದ ವೇದಿಕೆ. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ," ಎಂದು ನ್ಯಾಯಾಲಯ ಹೇಳಿತು. ಮುಂದುವರೆದು, "ಇದು ನೀತಿನಿರೂಪಣೆಯ ವಿಷವಾಗಿದ್ದು ನಾವು ಅದನ್ನು ಬದಲಿಸಲಾಗುವುದಿಲ್ಲ" ಎಂದು ತಿಳಿಸಿತು.
ಅಂತಿಮವಾಗಿ ನ್ಯಾಯಾಲಯವು, "ಈ ಮನವಿಯನ್ನು ನಾವು ತಿರಸ್ಕರಿಸುತ್ತೇವೆ. ಮನವಿ ವಜಾಗೊಳಿಸಲಾಗಿದೆ. ಸೂಕ್ತ ಪ್ರಾಧಿಕಾರದ ಮುಂದೆ ಮನವಿ ನೀಡಲು ಅರ್ಜಿದಾರರು ಸ್ವತಂತ್ರರು," ಎಂದಿತು.
ಸಂಸ್ಕೃತವನ್ನು ರಾಷ್ಟ್ರ ಭಾಷೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಹಾಗೆ ಮಾಡುವುದು ಇಂಗ್ಲಿಷ್ ಮತ್ತು ಹಿಂದಿಯನ್ನು ಅಧಿಕೃತ ಭಾಷೆ ಎಂದು ಮಾಡಿರುವ ಪ್ರಸಕ್ತ ಸಾಂವಿಧಾನಿಕ ನಿಬಂಧನೆಗಳಲ್ಲಿ ಯಾವುದೇ ವ್ಯತ್ಯಯ ಉಂಟು ಮಾಡುವುದಿಲ್ಲ ಎಂದು ಅರ್ಜಿದಾರರು ವಿವರಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ವಂಜಾರಾ ಅವರು ಈ ಪಿಐಎಲ್‌ಅನ್ನು ಸಲ್ಲಿಸಿದ್ದರು.