Vinayak Savarkar 
ಸುದ್ದಿಗಳು

ಸಾವರ್ಕರ್‌ ಹೆಸರಿನ ದುರ್ಬಳಕೆ: ರಾಷ್ಟ್ರೀಯ ಲಾಂಛನಗಳಡಿ ಪಟ್ಟಿ ಮಾಡಲು ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ

ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಹಾಗಾಗಿ, ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌.

Bar & Bench

ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಕುರಿತಾದ "ನಿರ್ದಿಷ್ಟ ವಾಸ್ತವ ಸಂಗತಿಗಳನ್ನು ಪ್ರಮಾಣೀಕರಿಸಲು" ಮತ್ತು ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಹಾಗಾಗಿ, ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟೀನ್ ಜಾರ್ಜ್ ಮಸೀಹ್ ಅವರ ಪೀಠ ಹೇಳಿದೆ.

ಪ್ರಕರಣದ ಅರ್ಜಿದಾರರಾದ ಡಾ. ಪಂಕಜ್ ಫಡ್ನಿಸ್ ಅವರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದರು. ವೃತ್ತಿಪರ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ರಾಷ್ಟ್ರೀಯ ಲಾಂಛನಗಳನ್ನು ಅನುಚಿತವಾಗಿ ಬಳಸುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ 'ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ, 1950' ಅಡಿಯ ನಿಬಂಧನೆಗಳಲ್ಲಿ ಸಾವರ್ಕರ್‌ ಅವರ ಹೆಸರನ್ನು ಸೇರಿಸಬೇಕು ಎಂದು ಅರ್ಜಿದಾರರು ಕೋರಿದರು.

"ನನಗೆ 65 ವರ್ಷ. ಕಳೆದ 30 ವರ್ಷಗಳಿಂದ ನಾನು ಅವರ (ಸಾವರ್ಕರ್) ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. 1950ರ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆಯಲ್ಲಿ ಅವರ ಹೆಸರನ್ನು ಸೇರಿಸಲು ಲೋಕಸಭಾ ಸ್ಪೀಕರ್‌ಗೆ ನಿರ್ದೇಶನಗಳನ್ನು ನೀಡುವಂತೆ ನಾನು ವಿನಂತಿಸುತ್ತೇನೆ. ಆರ್ಟಿಕಲ್ 51A ಮೂಲಭೂತ ಕರ್ತವ್ಯಗಳ ಕುರಿತದ್ದಾಗಿದೆ... ವಿರೋಧ ಪಕ್ಷದ ನಾಯಕರು (ರಾಹುಲ್ ಗಾಂಧಿ) ನನ್ನ ಮೂಲಭೂತ ಕರ್ತವ್ಯಗಳಿಗೆ ಅಡ್ಡಿಪಡಿಸಲು ಸಾಧ್ಯವಿಲ್ಲ" ಎಂದು ಫಡ್ನಿಸ್ ಹೇಳಿದರು.

ಆಗ ಪೀಠವು, "ಇದರಲ್ಲಿ ನಿಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಎಲ್ಲಿದೆ? ನಾವು ಈ ರೀತಿಯ ರಿಟ್‌ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇದರಲ್ಲಿ ಮಧ್ಯಪ್ರವೇಶಿಸಲು ನಾವು ಯಾವುದೇ ಸಕಾರಣಗಳನ್ನು ಕಾಣುತ್ತಿಲ್ಲ. ಕೋರಿರುವ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ನ್ಯಾಯಾಲಯ ಹೇಳಿತು.

ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯವು "ಸಾವರ್ಕರ್ ಅವರು ಬ್ರಿಟಿಷರ ಸಹಯೋಗಿಯಾಗಿದ್ದು, ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು"ಎಂದು ಹೇಳಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಅವರ ವಿರುದ್ಧ ರಾಹುಲ್‌ ಗಾಂಧಿಯವರು ನೀಡಿರುವ ಹೇಳಿಕೆಗಳು ಬೇಜವಾಬ್ದಾರಿಯಿಂದ ಕೂಡಿವೆ ಮತ್ತು ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದರೆ ನ್ಯಾಯಾಲಯವು ಸ್ವಯಂಪ್ರೇರಿತ ಕ್ರಮ ಕೈಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಹೇಳಿತ್ತು.

ಆದರೆ, ರಾಹುಲ್‌ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರ ವಿರುದ್ಧ ಹೂಡಲಾದ ಕ್ರಿಮಿನಲ್ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಪೀಠವು ತಡೆ ನೀಡಿತ್ತು.