Supreme Court 
ಸುದ್ದಿಗಳು

ತೆಲಂಗಾಣದಲ್ಲಿ ನ್ಯಾಯಾಧೀಶರಾಗಲು ತೆಲುಗು ಭಾಷಾ ಪ್ರವೀಣತೆ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ತೆಲಂಗಾಣ ನ್ಯಾಯಾಂಗ (ಸೇವೆ ಮತ್ತು ಕೇಡರ್) ನಿಯಮಾವಳಿ- 2023ರ ಅಡಿಯಲ್ಲಿ ಉರ್ದು ಭಾಷೆಯನ್ನು ಹೊರಗಿಡಲಾಗಿದೆ ಎಂದು ಅರ್ಜಿದಾರರು ಎತ್ತಿದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

Bar & Bench

ತೆಲಂಗಾಣ ರಾಜ್ಯದ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳಲು ತೆಲುಗು ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿರುವ ತೆಲಂಗಾಣ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

2023ರ ತೆಲಂಗಾಣ ನ್ಯಾಯಾಂಗ (ಸೇವೆ ಮತ್ತು ಕೇಡರ್) ನಿಯಮಾವಳಿಯಿಂದ ಉರ್ದು ಭಾಷೆಯನ್ನು ಹೊರಗಿಡಲಾಗಿದೆ ಎಂದು ಅರ್ಜಿದಾರರಾದ ಮೊಹಮ್ಮದ್ ಶುಜತ್ ಹುಸೇನ್ ಎತ್ತಿದ ವಾದವನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟಿನ್‌ ಜಾರ್ಜ್ ಮಸೀಹ್‌ ಅವರಿದ್ದ ಪೀಠ ತಿರಸ್ಕರಿಸಿತು.

"ಹೊರಗಿಡಲಾಗಿಲ್ಲ. (ನಿಯಮ) ತೆಲುಗು ಕೂಡ ಅಗತ್ಯವಿದೆ ಎಂದು ಮಾತ್ರ ಹೇಳುತ್ತದೆ. ಕ್ಷಮಿಸಿ, (ಅರ್ಜಿ) ಪುರಸ್ಕರಿಸಲು ಸಾಧ್ಯವಿಲ್ಲ " ಎಂದು ನ್ಯಾಯಾಲಯ ಹೇಳಿತು.

ತೆಲಂಗಾಣ ಹೈಕೋರ್ಟ್ ಈ ಹಿಂದೆ ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹುಸೇನ್ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಜೂನ್ 2023 ರಲ್ಲಿ ಜಾರಿಗೆ ಬಂದ ನಿಯಮಾವಳಿ ನ್ಯಾಯಾಂಗ ಸೇವೆ ಬಯಸುವ ಅಭ್ಯರ್ಥಿಗಳು ತೆಲುಗು ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು. ಪರೀಕ್ಷಾ ಸ್ವರೂಪದಲ್ಲಿ ಇಂಗ್ಲಿಷ್‌ನಿಂದ ತೆಲುಗಿಗೆ ಮತ್ತು ತೆಲುಗಿನಿಂದ ಇಂಗ್ಲಿಷ್‌ಗೆ ಭಾಷಾಂತರಿಸಲು ಸಹ ಅವಕಾಶ ಮಾಡಿಕೊಡಲಾಗಿದೆ ಎಂದು ವಾದಿಸಲಾಗಿತ್ತು.

ತಾನು ಉರ್ದು ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿದ್ದೇನೆ. ಹಾಗಾಗಿ, ನ್ಯಾಯಾಂಗ ಸೇವೆ ನೇಮಕಾತಿ ನಿಯಮಾವಳಿಯಲ್ಲಿ ಉರ್ದು ಭಾಷೆಯಲ್ಲಿ ಪರಿಣತಿ ಹೊಂದಿರುವ ಆಯ್ಕೆಯನ್ನು ಸಹ ಒದಗಿಸಬೇಕಿತ್ತು ಎಂದು ಹುಸೇನ್‌ ವಾದಿಸಿದ್ದರು.

ಉರ್ದು ತೆಲಂಗಾಣದ ಸಾಂಸ್ಕೃತಿಕ ನೀತಿಯ ಭಾಗವಾಗಿದೆ ಮತ್ತು 1966ರ ತೆಲಂಗಾಣ ಅಧಿಕೃತ ಭಾಷಾ ಕಾಯಿದೆಯಡಿ ಅದನ್ನು ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಆದರೂ ರಾಜ್ಯದಲ್ಲಿ ತೆಲುಗು ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ ಎಂಬ ಅಂಶದ ಆಧಾರದ ಮೇಲೆ ರಾಜ್ಯ ನೀತಿ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್ ಅವರ ಅರ್ಜಿ ತಿರಸ್ಕರಿಸಿತ್ತು.