Taj Mahal, Agra 
ಸುದ್ದಿಗಳು

ವಿಶ್ವ ಪಾರಂಪರಿಕ ನಗರವಾಗಿ ಆಗ್ರಾವನ್ನು ಘೋಷಿಸಲು ಕೋರಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

"ವಿಶ್ವ ಪಾರಂಪರಿಕ ನಗರ ಎಂದು ಘೋಷಿಸಿದ ನಂತರ ನಗರ ಬಹಳ ಸ್ವಚ್ಛವಾಗಿಬಿಡುತ್ತದೆಯೇ?" ಎಂದು ಕೇಳಿದ ನ್ಯಾಯಾಲಯ ಮನವಿ ವಜಾಗೊಳಸಿತು.

Bar & Bench

ಉತ್ತರ ಪ್ರದೇಶದ ಆಗ್ರಾ ನಗರವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್‌ ಅವರ ಪೀಠ ಅರ್ಜಿಯ ಬಗ್ಗೆ ಕೆಂಡಾಮಂಡಲವಾಯಿತು.

"ನಗರವೊಂದನ್ನು ವಿಶ್ವ ಪರಂಪರೆಯ ತಾಣವಾಗಿ ಹೇಗೆ ಘೋಷಿಸಲು ಸಾಧ್ಯ? ವಿಶ್ವ ಪರಂಪರೆಯ ನಗರ ಘೋಷಣೆ ಮಾಡಲು (ನ್ಯಾಯಾಲಯಕ್ಕೆ) ಅವಕಾಶ ಎಲ್ಲಿದೆ ? ನಗರನವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸುವುದರಿಂದ ಏನು ಪ್ರಯೋಜನ ? ವಿಶ್ವ ಪರಂಪರೆಯ ಸ್ಥಳ ಎಂದು ಘೋಷಿಸಿದ ನಂತರ ನಗರ ಬಹಳ ಸ್ವಚ್ಛವಾಗಿಬಿಡುತ್ತದೆಯೇ? ನಗರಕ್ಕೆ ಇದು ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ನೀವು ನಮಗೆ ಏನನ್ನೂ ಹೇಳಿಲ್ಲ!” ಎಂದು ನ್ಯಾಯಮೂರ್ತಿ ಓಕಾ ಅಸಮಾಧಾನ ವ್ಯಕ್ತಪಡಿಸಿದರು.

ಆಗ್ರಾದ ತಾಜ್ ಮಹಲ್ ಸುತ್ತಮುತ್ತಲಿನ ಅಭಿವೃದ್ಧಿ ಚಟುವಟಿಕೆಗಳಿಗೆ ಪರಿಸರ ಅನುಮತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಮನವಿಯೊಂದಕ್ಕೆ ಸಂಬಂಧಿಸಿದಂತೆ ಪೀಠ ಈ ರೀತಿ ಪ್ರತಿಕ್ರಿಯಿಸಿದೆ.

ಆಗ್ರಾವನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲು ಸಲ್ಲಿಸಿರುವ ಮನವಿಯನ್ನು ಸಮರ್ಥಿಸಲು ವಕೀಲರು ಸಮಯ ಕೋರಿದರು, ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

ವಿಶ್ವ ಪರಂಪರೆಯ ತಾಣಗಳು ಸಂರಕ್ಷಿತ ಸ್ಥಳಗಳು ಇಲ್ಲವೇ ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋ ಗುರುತಿಸಿದ ಪ್ರದೇಶಗಳಾಗಿರುತ್ತವೆ.